(ಸಾಂದರ್ಭಿಕ ಚಿತ್ರ)
ಮಂಗಳೂರು, ಅಕ್ಟೋಬರ್ 27 : ಮೆಕ್ಕಾ ಮಸೀದಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಪೋಲೀಸರು ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಪೊಲೀಸರ ಈ ಕ್ರಮವನ್ನು ಖಂಡಿಸಿ ಕಡಬ ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮೆಕ್ಕಾ ಮಸೀದಿಯ ಬಗ್ಗೆ ಯುವಕನೊಬ್ಬ ವಾಟ್ಸಾಪ್ನಲ್ಲಿ ಅವಹೇಳನೆ ಮಾಡಿದ್ದಾನೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತ ಯುವಕನನ್ನು ಹಿಂದೂ ಸಂಘಟನೆಯ ಪ್ರಮುಖರೇ ಪೋಲೀಸರಿಗೆ ಒಪ್ಪಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಆದರೆ, ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕರನ್ನು ಸಿಲುಕಿಸಲು ಪೊಲೀಸ್ ಅಧಿಕಾರಿಗಳು ಯತ್ನಿಸುತಿದ್ದಾರೆ ಎಂದು ಬೆಳ್ತಂಗಡಿಯ ಹಿಂದೂ ಸಂಘಟನೆಗಳು ಆರೋಪಿಸಿವೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲೀಸರಿಗೆ ನಾವು ಇಷ್ಟೊಂದು ಸಹಕಾರ ನೀಡುತ್ತಿರುವಾಗ ಪ್ರಕರಣಕ್ಕೆ ಸಂಬಂಧಪಡದ ಯುವಕನೊಬ್ಬನನ್ನು ಪ್ರಕರಣದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ಹಿಂದೂಗಳನ್ನು ಧಮನಿಸಲು ಯತ್ನಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳ ಈ ಹುನ್ನಾರವನ್ನು ವಿರೋಧಿಸಿ ಅಕ್ಟೋಬರ್ 28 ಶನಿವಾರದಂದು ಬೆಳ್ತಂಗಡಿಯ ಕಡಬ ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿವೆ ಎಂದು ತಿಳಿದು ಬಂದಿದೆ.
Comments are closed.