ಯಕ್ಷಗಾನ ತಾಳಮದ್ದಳೆ ಸಪ್ತಾಹ- 2017, ಸದಾಭಿವಂದನೆ- ಪುರಸ್ಕಾರ : ಜೋಶಿ ವಾಗರ್ಥ ಸರಣಿ : ಸಂಸ್ಮರಣ ಸಪ್ತಕ – ಸಮ್ಮಾನ
ಮಂಗಳೂರು, ನವೆಂಬರ್,15: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷಭಾರತಿ ಪುತ್ತೂರು ಇದರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ೫ನೇ ವರ್ಷದ `ಯಕ್ಷಗಾನ ತಾಳಮದ್ದಳೆ ಸಪ್ತಾಹ’ವನ್ನು ನವೆಂಬರ್ 19, 2017ರಿಂದ ನ. 25, 2017ರ ವರೆಗೆ ಮಂಗಳೂರು ಪುರಭವನದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ ಭಟ್ ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸುವರು. ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಡಾ| ಎಂ. ಪ್ರಭಾಕರ ಜೋಶಿಯವರ ವಿಮರ್ಶಾ ಸಂಕಲನ ‘ಕೊರಳಾರ’ ಕೃತಿಯನ್ನು ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ. ಡಾ| ಬಿ.ಎ. ವಿವೇಕ ರೈ ಬಿಡುಗಡೆಗೊಳಿಸುವರು. ಹರಿಕೃಷ್ಣ ಪುನರೂರು, ಪ್ರಸಾದ್ ಕಾಂಚನ್, ಹೇಮಂತ್ ರೈ ಮನವಳಿಕೆ ಮೊದಲಾದವರು ಅತಿಥಿಗಳಾಗಿರುವರು.
ಯಕ್ಷಾಂಗಣದ ಪಂಚಮ ವರ್ಷದ ನುಡಿಹಬ್ಬ ಎಂಬ ಘೋಷಣೆಯೊಂದಿಗೆ ಆಯೋಜಿಸಲಾದ ಸಪ್ತಾಹದಲ್ಲಿ ನವೆಂಬರ್ 19ರಿಂದ ಕ್ರಮವಾಗಿ ಕಾರ್ತಿಕೇಯ, ಮಾರ್ಕಾಂಡೇಯ, ವೈನತೇಯ, ಗಾಂಗೇಯ, ರಾಧೇಯ, ಕೌಂತೇಯ ಮತ್ತು ಆಂಜನೇಯ: ಪಗರಿದ ಸಂಕ (ತುಳು), ಸೌಗಂಧಿಕಾಹರಣ – ಹೀಗೆ ಏಳು ಪೌರಾಣಿಕ ಪ್ರಸಂಗಗಳು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಗೊಳ್ಳಲಿವೆ. ಇದರಲ್ಲಿ ಅವಿಭಜಿತ ಜಿಲ್ಲೆಯ ಹೆಸರಾಂತ ಕಲಾವಿದರು ಭಾಗವಹಿಸುತ್ತಾರೆ.
ಸದಾಭಿವಂದನೆ- ಪುರಸ್ಕಾರ:
ಸಪ್ತಾಹ ಉದ್ಘಾಟನೆಯ ಬಳಿಕ ಪ್ರಸಿದ್ಧ ಉದ್ಯಮಿ, ಸಮಾಜಸೇವಕ ಹಾಗೂ ಶಿಕ್ಷಣ ಮತ್ತು ಕ್ರೀಡಾಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಎ. ಸದಾನಂದ ಶೆಟ್ಟಿ ಅವರು ಎಪ್ಪತ್ತೈದು ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ ‘ಸದಾಭಿವಂದನಂ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಲ್ಲದೆ ಸಪ್ತಾಹಕ್ಕೆ ಐದು ವರ್ಷ ತುಂಬಿದ ಸಲುವಾಗಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ವನ್ನು ಆರಂಭಿಸಲಾಗಿದ್ದು ಮೊದಲ ಪ್ರಶಸ್ತಿಯನ್ನು ಸದಾನಂದ ಶೆಟ್ಟಿ ಅವರಿಗೆ ಪ್ರದಾನಮಾಡಲಾಗುವುದು.
‘ಜೋಶಿ ವಾಗರ್ಥಸರಣಿ’ ಎಂಬ ಶೀರ್ಷಿಕೆಯಡಿಯಲ್ಲಿ ಜರಗುವ ಈ ಬಾರಿಯ ತಾಳಮದ್ದಳೆ ಸಪ್ತಾಹದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕ್ರತ ಹಿರಿಯ ಅರ್ಥಧಾರಿ, ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ ಅವರು ಪ್ರತಿದಿನ ಅರ್ಥಧಾರಿಯಾಗಿ ಭಾಗವಹಿಸುವರು.
ಸಂಸ್ಮರಣ ಸಪ್ತಕ- ಸಮ್ಮಾನ:
ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ದುಡಿದು ಕಣ್ಮರೆಯಾದ ಹಿರಿಯಸಾಧಕರ ಸಂಸ್ಮರಣಾ ಕಾರ್ಯಕ್ರಮವನ್ನು ಪ್ರತಿದಿನ ಏರ್ಪಡಿಸಲಾಗಿದ್ದು ಅನುಕ್ರಮವಾಗಿ ಹಿರಿಯ ಸ್ತ್ರೀ ವೇಷಧಾರಿ ದಿ| iಂಕುಡೆ ಸಂಜೀವ ಶೆಟ್ಟಿ, ಹವ್ಯಾಸಿ ಕಲಾವಿದ ದಿ| ನುಳಿಯಾಲು ಕಿಟ್ಟಣ್ಣ ಶೆಟ್ಟಿ, ಕಲಾ ಪೋಷಕರಾದ ದಿ| ಶ್ರೀನಿವಾಸ ಭಟ್ ಅಳಪೆ ಮತ್ತು ದಿ| ಎ. ಶಾರದಾ; ಅರ್ಥಧಾರಿಗಳಾದ ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ದಿ| ಎ.ಕೆ ಮಹಾಬಲ ಶೆಟ್ಟಿ, ಭಾಗವತ ದಿ| ಬಂಟ್ವಾಳ ದಾಮೋದರ ಆಚಾರ್ಯ, ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಹಾಗೂ ಹಿರಿಯ ಅರ್ಥಧಾರಿ- ವಿದ್ವಾಂಸ ದಿ| ಕೆ. ಕಾಂತ ರೈ ಮೂಡಬಿದ್ರಿ- ಇವರಿಗೆ ನುಡಿನಮನ ಸಲ್ಲಿಸಲಾಗುವುದು.
ಇದರೊಂದಿಗೆ 2017-18ನೇ ಸಾಲಿನ `ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು ಡಾ.ಎಂ.ಪ್ರಭಾಕರ ಜೋಶಿಯವರಿಗೆ ನೀಡಲಾಗುವುದು. ಅಲ್ಲದೆ ಯಕ್ಷಗಾನ ಗುರು ಪಣಂಬೂರು ಶ್ರೀಧರ ಐತಾಳ್ ಅವರಿಗೆ ದಿ| ಬಿ. ದಾಮೋದರ ಬಂಟ್ವಾಳ ಪ್ರಶಸ್ತಿ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾಯರಿಗೆ ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿಯನ್ನು ಪ್ರದಾನಮಾಡಲಾಗುವುದು.
ನವೆಂಬರ 25ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸುವರು.
ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಆದಾನಿ ಗ್ರೂಪ್‌ನ ಕಿಶೋರ್ ಆಳ್ವ, ಕ.ಸಾ.ಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಕಡಂದಲೆ ಸುರೇಶ ಭಂಡಾರಿ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಮುಖ್ಯ ಅತಿಥಿಗಳಾಗಿರುವರು.
ಸಪ್ತಾಹದ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದ್ದು ಎಲ್ಲರ ಸಹಕಾರವನ್ನು ಕೋರಲಾಗಿದೆ. ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಎ. ಶಿವಾನಂದ ಕರ್ಕೇರ, ತೋನ್ಸೆ ಪುಷ್ಕಳ ಕುಮಾರ್, ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಅಶೋಕ ಮಾಡ ಕುದ್ರಾಡಿಗುತ್ತು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸುಧಾಕರ ರಾವ್ ಪೇಜಾವರ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಶೋಭಾ ಕೇಶವ ಕಣ್ಣೂರು ಮುಂತಾದವರು ಉಪಸ್ಥಿತರಿರುವರು ಎಂದು ವೇದಿಕೆಯ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
Comments are closed.