ಮೂಡುಬಿದಿರೆ: `ನಮ್ಮ ದೇಶದಲ್ಲಿ ಇಂದು ಜಾತಿ, ಮತ, ಎಡ-ಬಲ ವಾದಗಳನ್ನು ಬೆಂಬಲಿಸುತ್ತಿರುವವರು ನಿಜಧರ್ಮದ ಒಳಹುಗಳನ್ನು ಅರಿತಿಲ್ಲ; ಅನುಭಾವವನ್ನು ಅನುಭವಿಸಿಲ್ಲ. ಇಂತಹವರು ಕೇವಲ ನಾಲ್ಕು ದಿನ ದಿನಪತ್ರಿಕೆಗಳ ಮುಖ್ಯ ಸುದ್ದಿಯಾಗುತ್ತಾರೆ ಅಷ್ಟೆ. ಆದರೆ ಇಂತಹವರ ಆರ್ಭಟದಿಂದ ವಿಶಾಲ ವ್ಯಾಪ್ತಿಯ ಧರ್ಮಕ್ಕೆ ಯಾವುದೇ ಧಕ್ಕೆಯೂ ಆಗುವುದಿಲ್ಲ’ ಎಂದು ಆಧ್ಯಾತ್ಮಿಕ ಬರಹಗಾರ್ತಿ ವೀಣಾ ಬನ್ನಂಜೆ ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ ವಿಚಾರಗೋಷ್ಠಿಯಲ್ಲಿ ಅನುಭಾವದ ದೃಷ್ಟಿಯ ಬಗ್ಗೆ ಅವರು ತಮ್ಮ ವಿಚಾರ ಮಂಡಿಸಿದರು. ನಮಗೆ ದಕ್ಕುವ ಇಂದ್ರಿಯಾತೀತ ಅನುಭವವೇ ಅನುಭಾವ. ಅನುಭವಿಸದಿದ್ದರೆ ಅನುಭಾವ ನಮ್ಮ ಸ್ಪರ್ಶಕ್ಕೂ ಬರಲಿಕ್ಕಿಲ್ಲ. ಅನುಭಾವಿ ಪ್ರತಿ ಅಣುವನ್ನೂ ಪರಿಗಣಿಸುತ್ತಾನೆ.
ಅಕ್ಕಮಹಾದೇವಿ, ಬುದ್ಧನಂತಹವರು ಅನುಭಾವದ ಜೀವನ ನಡೆಸಿದರು. ಧರ್ಮದ ಶ್ರೇಷ್ಠತೆಯನ್ನು ಅವರು ಎತ್ತಿಹಿಡಿದರು. ಆದರೆ ಇಂತಹ ದೇಶದಲ್ಲಿ ಇಂದು ಮತೀಯವಾದಗಳು ಹೆಚ್ಚುತ್ತಿವೆ. ಇಂತಹ ವ್ಯವಸ್ಥೆಯನ್ನು ಬದಲಾಯಿಸಬೇಕೆಂದರೆ ಯಾವುದೇ ಪರ್ಯಾಯವನ್ನು ನೀಡದ ಅನುಭಾವಿ ಮಾರ್ಗವೇ ಆಯ್ಕೆಗೆ ಸೂಕ್ತವೆನಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
ಧರ್ಮ ಪರಂಪರೆಯನ್ನು ವಿಶ್ಲೇಷಿಸಿದ ವೀಣಾ ಬನ್ನಂಜೆ, ನಮ್ಮಲ್ಲಿ ಧಾರ್ಮಿಕಧಾರೆ, ಸಮಾನಾಂತರ ಧಾರೆ ಹಾಗೂ ಅನುಭಾವದ ಧಾರೆ ಎಂಬ ಪ್ರತ್ಯೇಕ ವಿಚಾರಗಳಿವೆ. ಶಂಕರಾಚಾರ್ಯ, ರಾಮಾನುಜರು ಹಾಗೂ ಬುದ್ಧ ಇವರೆಲ್ಲ ಪ್ರಧಾನ ಧರ್ಮಕ್ಕೆ ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಬಸವಣ್ಣ ಇವರೆಲ್ಲರನ್ನು ಮೀರಿ ನಿಂತು ವೈದಿಕ ಧರ್ಮದ ಕಟ್ಟುನಿಟ್ಟುಗಳಿಗೆ , ಮಡಿವಂತಿಕೆಗಳಿಗೆ ವಿರುದ್ಧವಾಗಿ ಹೊಸ ಆಚರಣೆಗಳನ್ನು ಸಮಾನಾಂತರ ಧಾರೆಗೆ ನೀಡಿದರು.
ನಂತರ ಬಂದ ಮಧ್ವಾಚಾರ್ಯರು ಅದಾಗಲೇ ಬಂದಿದ್ದ ಅದ್ವೈತ ಸಿದ್ಧಾಂತ ಹಾಗೂ ಬಸವಣ್ಣನ ವಿಚಾರಧಾರೆಗಳಿಗೆ ಸಂಪೂರ್ಣ ವಿರುದ್ಧವಾದ ದ್ವೈತ ಪರಂಪರೆಯನ್ನು ಪ್ರಚುರಪಡಿಸಿದರು. ಈ ಎರಡೂ ಧರ್ಮಧಾರೆಗಳಿಗಿಂತ ವಿಭಿನ್ನವಾದದ್ದು ಅನುಭಾವದ ಧಾರೆ. ಅನುಭವವನ್ನು ಪಡೆದು ಅದನ್ನು ಅಳವಡಿಸಿಕೊಳ್ಳುವುದು, ಅದರಂತೆ ನಡೆಯುವುದು ತುಂಬಾ ಕಷ್ಟ ಎಂದು ಅಭಿಪ್ರಾಯಪಟ್ಟರು.
ಅನುಭಾವದ ಜೀವನ ನಡೆಸುವುದು ತುಂಬಾ ಕಷ್ಟ. ಅನುಸಂಧಾನ ಇದ್ದಾಗ ಮಾತ್ರ ಅನುಭಾವ ಸಾಧ್ಯ. ಬುದ್ಧ, ಅಕ್ಕಮಹಾದೇವಿಯರನ್ನು ಶ್ರೇಷ್ಠ ಉದಾಹರಣೆಗಳಾಗಿ ನೀಡುತ್ತಾರೆಯೇ ಹೊರತು ಅವರಂತೆ ಬದುಕಿ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಯಾವಾಗ ಶ್ರೇಷ್ಠವ್ಯಕ್ತಿಗಳನ್ನು ಅನುಸರಿಸಲು ಸಾಧ್ಯವಿಲ್ಲವೋ ಆವಾಗ ನಾವು ಅವರನ್ನು ದೇವರನ್ನಾಗಿ ಮಾಡುತ್ತೇವೆ. ಇದು ನಮ್ಮ ಮುಂದಿರುವ ಪರಿಹಾಸ್ಯ ಎಂದು ವೀಣಾ ಬನ್ನಂಜೆ ಹೇಳಿದರು.
ವಿಚಾರಗೋಷ್ಠಿಯಲ್ಲಿ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಡಾ.ನಾ.ದಾ. ಶೆಟ್ಟಿ ಉಪಸ್ಥಿತರಿದ್ದರು.
Comments are closed.