ಮೂಡುಬಿದಿರೆ: “ಯಾವುದು ಪಂಚೇಂದ್ರೀಯಗಳಿಗೆ ಮಾತ್ರ ಸಂತೋಷವನ್ನು ನೀಡುತ್ತದೋ ಅದು ರುಚಿಯೆನಿಸಿಕೊಳ್ಳುತ್ತದೆ. ಅದು ಸಾಮಾಜಿಕ ಕಳಕಳಿಗೆ ಸಂಬಂಧ ಪಟ್ಟಾಗ ಹಾಗೂ ಪಂಚೇಂದ್ರೀಯಗಳನ್ನು ಮೀರಿ ಆನಂದ ದೊರಕುವ ರುಚಿಯು ಅಭಿರುಚಿ. ಈ ಆನಂದ ಘನವು ಕಲಾಭಿರುಚಿಯಿಂದ ಸಿಗುತ್ತದೆ.
ಆನಂದವು ವಿಶ್ರಾಂತ ಸ್ಥಿತಿಯಲ್ಲಿ ಮತ್ತೆ-ಮತ್ತೆ ಮರುಕಳಿಸುವುದು ಕಲೆಯಿಂದ ಮಾತ್ರ ಸಾಧ್ಯ. ಕಲೆಯನ್ನು ತಟಸ್ಥವಾಗಿ ಆನಂದಿಸುವ ಹಾಗೂ ಕಲೆಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಗುಣವಿದ್ದಾಗ ಅದು ಕಲಾಭಿರುಚಿಯೆನಿಸಿಕೊಳ್ಳುತ್ತದೆ. ಕಲೆಯನ್ನು ಅರ್ಥ ಮಾಡಿಕೊಳ್ಳಲು ಹೋದರೆ ಅದು ವ್ಯರ್ಥ. ಅದು ಅನುಭವಕ್ಕೆ ಬರುವಂಥದ್ದು. ಬದುಕು ಬೇಕು ಎಂದೆನಿಸುವುದು ಕಲಾಭಿರುಚಿ ಯಿಂದ ಎಂದು ಎ.ಅನಂತಪುರ ಈಶ್ವರಯ್ಯ ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಕಲಾಭಿರುಚಿ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಅಭಿರುಚಿಯು ವಂಶ ಪಾರಂಪರ್ಯವಾಗಿ ಹಾಗೂ ಸ್ವಾರ್ಜಿತವಾಗಿ ಹುಟ್ಟಿಕೊಳ್ಳುತ್ತದೆ. ಮಕ್ಕಳನ್ನು ಸರಿದಾರಿಗೆ ತರಲು ಕೌಟುಂಬಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪಾಠಗಳು ನೆರವಾಗುತ್ತವೆ. ಆದರೆ ಅವರಲ್ಲಿ ಭಾವುಕ ಮನಸ್ಸನ್ನು ಸೃಷ್ಟಿಸುವುದು ಕಲಾಪೋಷಣೆ ಆದಾಗ ಸಾಧ್ಯ. ಮಕ್ಕಳ ಮನಸ್ಸೆಂಬ ಮಣ್ಣನ್ನು ಹದಗೊಳಿಸಿ ಅದರಲ್ಲಿ ಮೌಲ್ಯವೆಂಬ ಬೀಜವನ್ನು ಬಿತ್ತಬೇಕು.” ಎಂದು ಅವರು ಹೇಳಿದರು.
ಅನಂತಪುರ ಈಶ್ವರಯ್ಯ ಮೂಲತಃ ಕಾಸರಗೋಡಿನವರು. ಇವರು ಉದಯವಾಣಿಯಲ್ಲಿ ಮ್ಯಾಗಜಿನ್ ಹಾಗೂ ಹಿರಿಯ ಸಂಪಾದಕರಾಗಿ, ತುಷಾರ ಮಾಸ ಪತ್ರಿಕೆಯಲ್ಲಿ ಸ್ಥಾಪಕ ಸಂಪಾದಕರಾಗಿ ಹಾಗೂ ರಾಗಧನಶ್ರೀ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಮಾಣ, ಅವಸಾನ, ಸರಸ ಮೊದಲಾದ ಬರಹಗಳನ್ನು ಬರೆದಿದ್ದಾರೆ. ಇವರು ಆಳ್ವಾಸ್ ನುಡಿಸಿರಿ ರಾಜ್ಯಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಲೆಯನ್ನು ಪೋಷಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.
Comments are closed.