ಮಂಗಳೂರು, ಡಿಸೆಂಬರ್ 17: ದೇವಸ್ಥಾನದ ಅಧ್ಯಕ್ಷರೊಬ್ಬರು ಮಸೀದಿ ಕಟ್ಟಲು ತಮ್ಮ ಭೂಮಿಯನ್ನೇ ದಾನವಾಗಿ ನೀಡುವ ಮೂಲಕ ಕೋಮು ಸೌಹಾರ್ದ ಮೆರೆದಿದ್ದಾರೆ.
ಕೋಮು ಗಲಭೆ, ಕೋಮು ರಾಜಕೀಯಗಳಿಂದ ತತ್ತರಿಸಿರುವ ಕರಾವಳಿಯಲ್ಲಿ ಇಂತಹ ಒಂದು ಕೋಮು ಸೌಹಾರ್ದ ಮೂಡಿಸುವ ಅಪರೂಪದ ವಿದ್ಯಮಾನ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಯ್ಯೂರು ಎಂಬಲ್ಲಿ.
ಪುತ್ತೂರು ತಾಲ್ಲೂಕಿನ ಕೆಯ್ಯೂರು ಓಲೆಮುಂಡೋವು ನಿವಾಸಿ ಪ್ರಗತಿಪರ ಕೃಷಿಕ ಹಾಗೂ ಇಲ್ಲಿಯ ವಿಷ್ಣುಮೂರ್ತಿ ದೇವಾಲಯದ ಅಧ್ಯಕ್ಷ ಮೋಹನ್ ರೈ ಅವರು ತಮ್ಮ ಭೂಮಿಯನ್ನು ಮಸೀದಿ ನಿರ್ಮಿಸಲು ದಾನ ಮಾಡುವ ಮೂಲಕ ಸುದ್ಧಿಯಾಗಿದ್ದಾರೆ.
ಮೋಹನ್ ರೈ ಅವರ ಒಡೆತನದ ಭೂಮಿಗೆ ತಾಗಿಕೊಂಡೇ ಓಲೆಮುಂಡೋವು ಐತಿಹಾಸಿಕ ದರ್ಗಾ ಹಾಗೂ ಮಸೀದಿ ಇದೆ. ದರ್ಗಾ ಕಟ್ಟಡ ವಿಸ್ತರಿಸಲು ಸ್ಥಳಾವಕಾಶದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಮಸೀದಿಯ ಸಮಿತಿಯ ಸದಸ್ಯರು ಮೋಹನ್ ರೈ ಅವರಲ್ಲಿ ಜಾಗ ನೀಡುವಂತೆ ಕೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮೋಹನ್ ರೈ ತಮ್ಮ ಸ್ವಾಧೀನದಲ್ಲಿರುವ 12 ಸೆಂಟ್ಸ್ ಜಾಗವನ್ನು ಮಸೀದಿಗೆ ನೀಡಲು ಮುಂದಾಗಿದ್ದಾರೆ.ಈ ನಿಟ್ಟಿನಲ್ಲಿ ಮಸೀದಿಯ ಅಧ್ಯಕ್ಷ ಪುತ್ತುಮೋನು ಹಾಜಿ ಸೇರಿದಂತೆ ಇನ್ನಿತರ ಮುಖಂಡರನ್ನು ಭೇಟಿ ಮಾಡಿ ಭೂಮಿ ನೀಡುವುದಾಗಿ ಮೋಹನ್ ರೈ ವಾಗ್ದಾನ ನೀಡಿದ್ದಾರೆ.
ಕೋಮು ಸೌಹಾರ್ದ ಮೂಡಿಸಿದ ಈ ಅಪರೂಪದ ಘಟನೆಯ ಪ್ರೇರಣೆಯಿಂದಾದರೂ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವ ಕೆಲವೊಂದು ವ್ಯಕ್ತಿಗಳು ಪಾಠ ಕಲಿತರೆ ಕರಾವಳಿಯಲ್ಲಿ ಕೋಮು ಸೌಹಾರ್ದ ಮೂಡ ಬಹುದು ಎಂದು ಸಾರ್ವಜನಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments are closed.