ಕರಾವಳಿ

ಹೊನ್ನಾವರ ‘ಬಾಲಕಿಗೆ ಚೂರಿ ಇರಿತ’ದ ಸತ್ಯಾಂಶ ಬಯಲು; ಅಂದು ಆಗಿದ್ದೇನು ಗೊತ್ತಾ?

Pinterest LinkedIn Tumblr

ಹೊನ್ನಾವರ: ಇತ್ತೀಚೆಗಷ್ಟೇ ಪರೇಶ್ ಮೇಸ್ತ ಸಾವಿನ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಹೊನ್ನಾವರದಲ್ಲಿ ಶಾಲಾ ಬಾಲಕಿಯೋರ್ವಳಿಗೆ ಚೂರಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಘಟನೆಯ ರಹಸ್ಯವನ್ನು ಭೇದಿಸಿದ್ದು ಈ ಘಟನೆ ಬೆಚ್ಚಿ ಬೀಳಿಸುವಂತಿದೆ.

ಪರೇಶ್ ಮೇಸ್ತ ಕೊಲೆ ಪ್ರಕರಣದಲ್ಲಿಯೇ ಗಲಭೆಗಳಿಗೆ ಕಾರಣವಾಗಿ ಅಶಾಂತಿ ಎದ್ದಿದ್ದ ಊರಿನಲ್ಲಿ ಈ ಚೂರಿ ಇರಿತ ಪ್ರಕರಣವು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಬಾಲಕಿಯ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆದಿದ್ದಾರೆಂದು ಕಿಡಿಗೇಡಿಗಳು ವದಂತಿ ಹಬ್ಬಿಸಿ ಇನ್ನಷ್ಟು ಅಶಾಂತಿಗೆ ಕಾರಣರಾಗಿದ್ದರು. ಈ ಘಟನೆ ತರುವಾಯ ಹೊನ್ನಾವರ ಪರಿಸರ ಮತ್ತೊಮ್ಮೆ ಉದ್ರಿಕ್ತಗೊಂಡಿತ್ತು. ಆದರೇ ಈ ಪ್ರಕರಣಕ್ಕೀಗ ಟ್ವಿಸ್ಟ್ ದೊರೆತಿದ್ದು ಆಕೆಯ ಮೇಲೆ ಹಲ್ಲೆ ನಡೆದಿಲ್ಲ, ಬದಲಾಗಿ ಆಕೆಯೇ ಮುಳ್ಳಿನಲ್ಲಿ ಗೀರಿಕೊಂಡಿದ್ದಾಳೆಂಬುದು ತಿಳಿದಿದೆ.

ಅಂದು ಬಾಲಕಿ ಹೇಳಿದ್ದೇನು?
ಹೊನ್ನಾವರ ತಾಲೂಕಿನ ಮಾಗೋಡು ವ್ಯಾಪ್ತಿಗೆ ಬರುವ ಕೊಡ್ಲಗದ್ದೆ ಎಂಬಲ್ಲಿ 9ನೆಯ ನಡೆದುಕೊಂಡು ಹೋಗುವಾಗ ಬಾಲಕಿಯ ಎರಡು ಕೈಗಳ ಮೇಲೆ ಕೊಯ್ದ ಗಾಯಗಳು ಕಂಡುಬಂದಿದ್ದು ವಿದ್ಯಾರ್ಥಿನಿಯನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಬೆಳಿಗ್ಗೆ 7.30ರ ಸುಮಾರಿಗೆ ಶಾಲೆಗೆ ತೆರಳುವಾಗ ಇಬ್ಬರು ಅಪರಿಚಿತರು ಹಿಂದಿನಿಂದ ಬಂದು ಎರಡು ಕೈಗಳನ್ನೂ ಹಿಡಿದು ಚಾಕು ತೋರಿಸಿ ಕೊಲೆ ಮಾಡುತ್ತೇವೆ ಎಂದು ಬೆದರಿಸಿ ಅಪಹರಣ ಮಾಡಲು ಪ್ರಯತ್ನಿಸಿ ಎರಡೂ ಕೈಗಳಿಗೆ ಗಾಯ ಮಾಡಿದ್ದರು. ಇದೇ ವೇಳೆ ಬೇರೊಂದು ದ್ವಿಚಕ್ರ ವಾಹನ ಬಂದ ಶಬ್ದ ಕೇಳಿ ಇಬ್ಬರೂ ಪರಾರಿಯಾಗಿದ್ದರೆಂದು, ಇದರಲ್ಲಿ ಓರ್ವ ದಪ್ಪಗಿದ್ದು ದಾಡಿ ಬಿಟ್ಟಿದ್ದ. ಇನ್ನೋರ್ವ ಸಣಕಲು ದೇಹದವನಾಗಿದ್ದು ಜೀನ್ಸ್ ಪ್ಯಾಂಟ್ ಧರಿಸಿದ್ದ ಎಂದು ಬಾಲಕಿ ಪೊಲೀಸ್ ಹೇಳಿಕೆ ವೇಳೆ ತಿಳಿಸಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ಚೂರಿ ಇರಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ವಿವಿಧ ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದಲ್ಲದೇ ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕರ ಮೂಲಕ ಬಾಲಕಿಯ ಜೊತೆ ಮಾತುಕತೆ ನಡೆಸಿದ್ದು ಆಗ ಬಾಲಕಿ ನಿಜವಾಗಿ ನಡೆದ ವಿಷಯವನ್ನು ಬಾಯ್ಬಿಟ್ಟಿದ್ದಾಳೆ.

ಚೂರಿ ಇರಿತದ ಸತ್ಯಾಂಶವೇನು ಗೊತ್ತಾ?
ಬಾಲಕಿಯು ತನ್ನ ಮನೆಯಿಂದ 8 ಕಿಲೊಮೀಟರ್ ದೂರ ಇರುವ ಶಾಲೆಗೆ ಕಾಡಿನ ರಸ್ತೆಯಲ್ಲಿ ನಿತ್ಯವೂ ನಡೆದುಕೊಂಡು ಹೋಗುತ್ತಿದ್ದು ಮಾಗೋಡು ವ್ಯಾಪ್ತಿಯ ಬಜ್ಜಿಕೇರಿ ಎಂಬಲ್ಲಿನ ಬಾಲಕಿಯ ಸ್ವಜಾತಿಯವನೇ ಆಗಿರುವ ಗಣೇಶ್ ಈಶ್ವರ ನಾಯ್ಕ ಎಂಬಾತ ನಿರಂತರವಾಗಿ ಬಾಲಕಿಯನ್ನು ಅಡ್ಡಗಟ್ಟಿ ತನ್ನ ಕಾರು ಮತ್ತು ಬೈಕಿನಲ್ಲಿ ತನ್ನೊಡನೆ ಸುತ್ತಾಡುವಂತೆ ಒತ್ತಾಯಿಸಿದ್ದ. ಅಂದು ಶುಕ್ರವಾರವೂ ಕೂಡ ಆಕೆಯನ್ನು ಅಡ್ಡಗಟ್ಟಿ ‘ನಿನ್ಗೆ ತುಂಬಾ ಸೊಕ್ಕು, ನನ್ನ ಜೊತೆ ಬೈಕಿನಲ್ಲಿ ಬರಲಾಗುವುದಿಲ್ಲವೇ? ನಿನಗೇನಾದರೂ ಆದರೇ ನನ್ನ ಜೊತೆ ಬರುತ್ತೀಯಾ’ ಎಂದು ಬೆದರಿಸಿದ್ದ. ಆತನ ಕಿರುಕುಳದಿಂದ ಬೇಸತ್ತು ಆ ವಿಷಯವನ್ನು ತನ್ನ ತಾಯಿಗೆ ಹೇಳಿದ್ದಳು. ಈ ವಿಷಯವನ್ನು ಬಾಲಕಿಯ ತಾಯಿ ಗ್ರಾಮ ಪಂಚಾಯತ್ ಸದಸ್ಯರೋರ್ವರ ಬಳಿ ಹೇಳಿದ್ದು ಅವರು ಗಣೇಶ ಈಶ್ವರ ನಾಯ್ಕನಿಗೆ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದ್ದರು.

ತಾನೇ ಕೈಗೆ ಗಾಯ ಮಾಡಿಕೊಂಡಳು!
ಹೊನ್ನಾವರ ಗಲಭೆಯ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನ ಶಾಲೆಗೆ ಹೋಗದ ಬಾಲಕಿ ಡಿಸೆಂಬರ್ 14ರಂದು ಶಾಲೆಗೆ ಹೋಗಬೇಕಾಗಿತ್ತು. ಅಂದು ಪರೀಕ್ಷೆಯೂ ಇತ್ತು. ಈ ಸಂದರ್ಭದಲ್ಲಿ ಮತ್ತೆ ಗಣೇಶ್ ಈಶ್ವರ ನಾಯ್ಕ ತನಗೆ ಕಿರುಕುಳ ನೀಡಬಹುದು ಎಂದು ಬಾಲಕಿ ಆತಂಕಗೊಂಡಿದ್ದಾಳೆ. ತಾನು ಬದುಕಬಾರದು, ಬದುಕಿದರೆ ಆತ ತನಗೆ ಏನಾದರೂ ಮಾಡಬಹುದೆಂಬ ಭಯದಲ್ಲಿ ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ತಾನೇ ತಂದಿದ್ದ ನಿಂಬೆ ಹಣ್ಣಿನ ಮುಳ್ಳಿನಿಂದ ಎರಡೂ ಕೈಗಳಿಗೆ ತಾನೇ ಗಾಯಮಾಡಿಕೊಂಡಿದ್ದಾಳೆ. ಬಳಿಕ ತನ್ನ ತಪ್ಪಿನ ಅರಿವಾಗಿ ಅದೇ ಗಾಯದೊಂದಿಗೆ ಶಾಲೆಗೆ ಹೋಗಿದ್ದಳು.

ಸುಳ್ಳು ಸುದ್ದಿ ಹರಡಿದರು!
ಅಂದು ಸಂಜೆ ಶಾಲೆಯಿಂದ ಮಾಗೋಡಿಗೆ ವಾಪಸ್ ಬಂದ ನಂತರ ಕೈಗೆ ಸುತ್ತಿಕೊಳ್ಳಲು ಬ್ಯಾಂಡೇಜ್ ತರುವಂತೆ ಸ್ನೇಹಿತೆಯನ್ನು ಕಳುಹಿಸಿದ್ದು ಆಕೆ ಸ್ನೇಹಿತೆ ತಂದ ಬ್ಯಾಂಡೇಜ್ ಸಣ್ಣದಾಗಿದೆ ಎಂದು ಮತ್ತೆ ಅಂಗಡಿಗೆ ಆಕೆಯನ್ನು ವಾಪಸ್ ಕಳುಹಿಸಿದಾಗ ಅಂಗಡಿಯವನೇ ಗಾಯಗೊಂಡ ಬಾಲಕಿಯನ್ನು ಕರೆಯಿಸಿ ಗಾಯ ಪರೀಕ್ಷಿಸಿದ್ದ. ಆದರೇ ಗಾಯ ಹೇಗಾಗಿದೆ ಎಂಬ ಬಗ್ಗೆ ಬಾಲಕಿಯನ್ನು ಕೇಳದೆ ‘ನಿನ್ನ ರಾತ್ರಿ ಯಾರೋ ಇಬ್ಬರು ಅಪರಿಚಿತರು ಕೊಡ್ಲಗದ್ದೆಗೆ ಕಡೆಗೆ ಹೋಗುವುದನ್ನು ನಾನು ನೋಡಿದ್ದೇನೆ. ಅದರಲ್ಲಿ ಒಬ್ಬನಿಗೆ ಗಡ್ಡ ಇತ್ತು, ಒಬ್ಬ ಸಪೂರ ಇದ್ದ’ ಎಂದು ಕಥೆ ಕಟ್ಟಿದ್ದ. ಇದನ್ನು ನಂಬಿದ ಗ್ರಾಮಸ್ಥರೂ ಕೂಡ ಅನ್ಯ ಕೋಮಿನ ವ್ಯಕಿಗಳೇ ಇದನ್ನು ಮಾಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು. ಮೊದಲೇ ಭಯ ಮತ್ತು ಗೊಂದಲದಲ್ಲಿದ್ದ ಬಾಲಕಿ ತನ್ನ ತಪ್ಪನ್ನು ಮರೆಮಾಚಿ ಜನರು ಮಾತಾಡಿಕೊಂಡ ವಿಚಾರವನ್ನೇ ನೆನಪಿಟ್ಟುಕೊಂಡು ಪೊಲೀಸರಿಗೆ ಅದೇ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

ವೈದ್ಯರ ವರದಿಯಲ್ಲಿದ್ದಿದ್ದು…..
ತಜ್ಞ ವೈದ್ಯರಿಂದ ಬಾಲಕಿಯ ಕೈಗಳ ಮೇಲೆ ಆದ ಗಾಯಗಳನ್ನು ಪರೀಕ್ಷೆ ಮಾಡಿದ್ದು ಈ ಗಾಯವು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳು (hesitation injury mark) ಎಂದು ದೃಢಪಡಿಸಿದ್ದಾರೆ. ಆಪ್ತ ಸಮಾಲೋಚನೆಯ ವೇಳೆ ಬಾಲಕಿ ತಾನು ಸ್ವತಃ ಗಾಯ ಮಾಡಿಕೊಂಡಿದ್ದನ್ನು ಒಪ್ಪಿದ್ದಾಳೆ. ನ್ಯಾಯಾಧೀಶರ ಮುಂದೆಯೂ ಬಾಲಕಿ ಸತ್ಯಾಂಶ ಹೇಳಿದ್ದು ಗಣೇಶ್ ಈಶ್ವರ ನಾಯ್ಕ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಹೀಗೆ ಮಾಡಿಕೊಂಡೆ ಎಂದು ಹೇಳಿದ್ದಾಳೆ.

ಪೋಕ್ಸೋ ಕಾಯ್ದೆ, ಆರೋಪಿ ಎಸ್ಕೇಪ್
ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಗಣೇಶ್ ಈಶ್ವರ ನಾಯ್ಕನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಶೋಧ ನಡೆಯುತ್ತಿದೆ.

ಈ ಪ್ರಕರಣವನ್ನು ಬಳಸಿ ಕೋಮು ಗಲಭೆ ಮತ್ತು ಶಾಂತಿ ಕದಡಲು ಯತ್ನಿಸಿದವರ ಮೇಲೆ ಪ್ರಕರಣ ದಾಖಲಿಸುವುದಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

Comments are closed.