ಮಂಗಳೂರು, ಡಿಸೆಂಬರ್.26: ಸಿಪಿಐ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಘಟಕದ 23ನೇ ಜಿಲ್ಲಾ ಸಮ್ಮೇಳನ ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು.
ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ನಗರದಲ್ಲಿ ಸಿಪಿಐ ಕಾರ್ಯಕರ್ತರ ಬೃಹತ್ ಜಾಥಾ ನಡೆಯಿತು. ರ್‍ಯಾಲಿಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಳಿಕ ನಗರದ ನೆಹರೂ ಮೈದಾನದಲ್ಲಿ ನಡೆದ ಸಿಪಿಐ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಘಟಕದ 23ನೇ ಜಿಲ್ಲಾ ಸಮ್ಮೇಳನವನ್ನು ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ ಉದ್ಘಾಟಿಸಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಬಡವರುಮತ್ತು ದುಡಿಯುವ ವರ್ಗದ ಜನರ ಹಕ್ಕುಗಳನ್ನು ಕಡೆಗಣಿಸುತ್ತಿರುವುದಲ್ಲದೆ, ಎಲ್ಲ ಕಾರ್ಮಿಕ ಕಾನೂನುಗಳನ್ನೂ ದುರ್ಬಲಗೊಳಿಸಿ, ಕಾರ್ಮಿಕರ ಹಕ್ಕುಗಳಿಗೆ ತಿಲಾಂಜಲಿ ನೀಡುತ್ತಿದೆ ಎಂದು ಅವರು ತಮ್ಮ ಉದ್ಘಾಟನ ಭಾಷಣದಲ್ಲಿ ಆರೋಪ ಮಾಡಿದರು.
ಒಂದು ವರ್ಷದ ಹಿಂದೆ ನೋಟು ಅಮಾನ್ಯೀಕರಣಗೊಳಿಸಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೀಗ ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ (ಎಫ್‌ಆರ್ಡಿಐ) ಕಾನೂನು ಜಾರಿಗೊಳಿಸಿ ಬಡವರು ಬ್ಯಾಂಕ್ನಲ್ಲಿ ಇರಿಸಿರುವ ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿದೆ ಎಂದು ಡಾ.ಸಿದ್ದನಗೌಡ ಪಾಟೀಲ ಅವರು ದೂರಿದರು.
ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಕಾಸರಗೋಡು ಜಿಲ್ಲಾ ಸಹ ಕಾರ್ಯದರ್ಶಿ ಬಿ.ವಿ.ರಾಜನ್, ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಂ ಬಲ್ಲಂಗುಡೇಲ್, ಎಐಟಿಯುಸಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ವಿ.ರಾವ್, ಪಕ್ಷದ ಮುಖಂಡರಾದ ವಿ.ಸೀತಾರಾಮ ಬೇರಿಂಜ, ವಿ.ಶೇಖರ್, ಪಿ.ಸಂಜೀವ, ಸರಸ್ವತಿ ಕಡೇಶಿವಾಲಯ, ಭಾರತಿ ಶಂಭೂರು, ನಾಗೇಶ್ ಕಲ್ಲೂರು, ಕೆ.ವಿ.ಭಟ್ ಮತುತಿ ಎ.ಪಿ.ರಾವ್ ಉಪಸ್ಥಿತರಿದ್ದರು.
Comments are closed.