ಕರಾವಳಿ

ಕರಾವಳಿ ಉತ್ಸವ – ನೆಟ್‍ಬಾಲ್ ಪಂದ್ಯಾಟಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 27 ಕರಾವಳಿ ಉತ್ಸವ ಸಮಿತಿ, ಜಿಲ್ಲಾಡಳಿತ,ದ.ಕ ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮಂಗಳೂರು ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನೆಟ್‍ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಕರಾವಳಿ ಉತ್ಸವ ಮೈದಾನದಲ್ಲಿ ಇಂದು ನಡೆಯಿತು.

ದ.ಕ ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಎಂ.ವಿ ನಾಯಕ್ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಕ್ರೀಡಾಳುಗಳು ಸಮಾನವಾಗಿ ಸ್ವೀಕರಿಸುತ್ತಾರೆ ಆದರೆ ಅದರಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು. ಅಲ್ಲದೇ ಈ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಕಣ್ಣಲ್ಲಿ ಕ್ರೀಡಾಸ್ಪೂರ್ತಿಯು ಕಾಣಿಸುತ್ತಿದ್ದು ಆ ಸ್ಪೂರ್ತಿಯಿಂದಲೇ ಆಡಿ ಗೆಲುವನ್ನು ಪಡೆದುಕೊಳ್ಳಿರಿ ಎಂದು ಶುಭ ಹಾರೈಸಿದರು.

ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಂಯೋಜಕ ಹಾಗೂ ಜಿಲ್ಲೆಗೆ ನೆಟ್‍ಬಾಲನ್ನು ಪರಿಚಯಿಸಿದ ಪ್ರೇಮನಾಥ ಶೆಟ್ಟಿ ಮಾತನಾಡಿ ಪ್ರಾರಂಭಿಕ ಹಂತದಲ್ಲಿ ನೆಟ್‍ಬಾಲ್‍ಗೆ ಜಿಲ್ಲೆಯಲ್ಲಿ ಪ್ರೋತ್ಸಾಹ ಸಿಗದಿದ್ದರೂ 10 ವರ್ಷದ ಪರಿಶ್ರಮದ ನಂತರ ಈಗ ಈ ಕ್ರೀಡೆಗೆ ಕರಾವಳಿ ಉತ್ಸವದ ಮುಖಾಂತರ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸಂತಸ ತಂದಿರುತ್ತದೆ ಎಂದು ನುಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಮಾತನಾಡಿ ಶ್ರಮ ಮತ್ತು ಪರಿಶ್ರಮದಿಂದ ಯಶಸ್ಸನ್ನು ಪಡೆಯುವುದು ಸಾಧ್ಯವಿದೆ ಎಂದು ಶುಭ ನುಡಿದರು.

ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಈ ಪಂದ್ಯಾಟವು ನಡೆದಿದ್ದು. ಒಟ್ಟು 26 ತಂಡಗಳು ಭಾಗವಹಿಸಿರುತ್ತದೆ. ಪಂದ್ಯಾಟದ ವಿಜೇತರಿಗೆ ಟ್ರೋಫಿಯ ಜೊತೆಗೆ ನಗದನ್ನು ನೀಡಲಾಗುವುದು ಎಂದು ಕ್ರೀಡಾಧಿಕಾರಿ ಲಿಲ್ಲಿ ಪಾೈಸ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ರಾಷ್ಟ್ರಮಟ್ಟದ ನೆಟ್‍ಬಾಲ್ ಆಟಗಾರ ನಿತಿನ್ ರನ್ನು ಸನ್ಮಾನಿಸಲಾಯಿತು. 17 ಬಾರಿ ರಾಷ್ಟ್ರವನ್ನು ಪ್ರತಿನಿಧಿಸಿದ ಆಟಗಾರ ನಿತಿನ್: ನಿತಿನ್ ದ.ಕ ಜಿಲ್ಲೆಯ ವಿಟ್ಲದ ನಿವಾಸಿಯಾಗಿದ್ದು ಜನಾರ್ಧನ ಪೂಜಾರಿ ಮತ್ತು ಚಂದ್ರಾವತಿ ದಂಪತಿಗಳ ಪುತ್ರನಾಗಿದ್ದಾರೆ.

ಇವರು 9 ನೇ ತರಗತಿಯಲ್ಲಿರುವಾಗಲೇ ಹೈಸ್ಕೂಲ್ ವಿಭಾಗದಲ್ಲಿ 1 ಬಾರಿ, ಪಿಯುಸಿ ವಿಭಾಗದಲ್ಲಿ 6 ಬಾರಿ, ತದನಂತರ 17 ಬಾರಿ ರಾಷ್ಟ್ರವನ್ನು ಪ್ರತಿನಿಧಿಸಿದ್ದರು. ಅದರಲ್ಲಿ 2 ಚಿನ್ನದ ಪದಕ, 2 ಬೆಳ್ಳಿಯ ಪದಕ ಹಾಗೂ 4 ಕಂಚಿನ ಪದಕ ಪಡೆದಿರುತ್ತಾರೆ.ಅಲ್ಲದೇ ಭಾರತ ತಂಡದ ಉಪನಾಯಕನಾಗಿ ಏಷ್ಯನ್ ಗೇಮ್ಸ್‍ನಲ್ಲಿ ಪಂದ್ಯವೊಂದರಲ್ಲಿ ತಂಡದ 51 ಗೋಲ್‍ಗಳಲ್ಲಿ 40 ಗೋಲ್‍ಗಳನ್ನು ವೈಯಕ್ತಿಕವಾಗಿ ಗಳಿಸಿ ಭಾರತ ತಂಡ ಚಿನ್ನದ ಪದಕ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.

ಸಮಾರಂಭದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಕರು ಮತ್ತು ತರಬೇತುದಾರರು ಉಪಸ್ಥಿತರಿದ್ದರು.

Comments are closed.