ಮಂಗಳೂರು,ಡಿಸೆಂಬರ್.28: ನಗರದ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೆರವೇರಿಸಿದರು.
ಬಳಿಕ ಧಾರ್ಮಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮಕ್ಷೇತ್ರಗಳು ಅಭಿವೃದ್ಧಿಯಾದರೆ ಸಮಾಜಕ್ಕೆ ಸುಭಿಕ್ಷೆ ಪ್ರಾಪ್ತವಾಗುತ್ತದೆ. ಕಳೆದ 250 ವರ್ಷಗಳಲ್ಲಿ ಆಗದಷ್ಟು ಧರ್ಮಕ್ಷೇತ್ರಗಳ ಅಭಿವೃದ್ಧಿ ಕಳೆದ 25 ವರ್ಷಗಳಿಂದೀಚೆಗೆ ನಡೆದಿದೆ. ಈ ಮೂಲಕ ಸಮಾಜದಲ್ಲಿ ಧರ್ಮಜಾಗೃತಿಯಾಗಿದೆ ಎಂದು ಹೇಳಿದರು.
ಗ್ರಾಮ ಗ್ರಾಮದಲ್ಲೂ ಧಾರ್ಮಿಕ ಕೇಂದ್ರಗಳ ಪುನರುಜ್ಜೀವನ ಆದಾಗ ಸಮಾಜದಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತವೆ. ದೇವರಿಗೆ ಶರಣಾಗುವ ಹಾಗೂ ತಂದೆ, ತಾಯಿ, ಗುರುಗಳ ಆಶೀರ್ವಾದದ ಮುಖೇನ ಮನುಷ್ಯ ಬೆಳವಣಿಗೆಯನ್ನು ಕಾಣಬೇಕು. ವ್ಯಕ್ತಿಯ ಬೆಳವಣಿಗೆಗೆ ಪೂರಕವಾಗಿ ಧಾರ್ಮಿಕ ಅಂಕುಶವೂ ಇರಬೇಕು ಎಂದು ಅಭಿಪ್ರಾಯಪಟ್ಟರು.
ಕೋಟಿ-ಚೆನ್ನಯರು ಅಂದಿನ ಕಾಲದಲ್ಲಿ ಪ್ರತೀ ಸಮಸ್ಯೆ, ಅವಮಾನವನ್ನು ಅತ್ಯಂತ ಸಮರ್ಥವಾಗಿ ಎದುರಿಸಿ, ಹೋರಾಟದ ಮೂಲಕ ಬದುಕು ಕಟ್ಟಿಕೊಂಡರು. ಅವರ ನಡೆ ಮಾದರಿ. ಇಂತಹ ಪುಣ್ಯ ಪುರುಷರ ಆರಾಧನೆಯ ಕಂಕನಾಡಿ ಗರಡಿ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಹಾಗೂ ಹಿರಿಮೆ ಇದೆ. ಇದೀಗ ನೂತನ ಸುತ್ತುಪೌಳಿ ನಿರ್ಮಾಣವಾಗುವ ಮೂಲಕ ಕ್ಷೇತ್ರವು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗುವಂತಾಗಿದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಶ್ರೀಕ್ಷೇತ್ರ ಕನ್ಯಾಡಿಯ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ತ್ಯಾಗ ಹಾಗೂ ನಿಷ್ಕಾಮ ಸೇವೆ ನಡೆಸಿದಾಗ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದರು.
ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಜಯರಾಮ್ ಭಟ್, ಶ್ರೀ ಕ್ಷೇತ್ರ ಕದ್ರಿಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ, ಪ್ರಮುಖರಾದ ಸಿ.ಎ.ಎ ಕೃಷ್ಣಮೂರ್ತಿ, ದುಬೈ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಿತೇಂದ್ರ ಸುವರ್ಣ, ದುಬೈ, ಜೆ.ವಿ. ಸನ್ಸ್ ಮಾಲಕ ಎಂ. ಸೀತಾರಾಮ್, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಸಮಿತಿ ಅಧ್ಯಕ್ಷ ಕೆ.ಪಿ. ಶೆಟ್ಟಿ, ಚಿತ್ರ ನಿರ್ದೇಶಕ ಡಾ. ರಾಜಶೇಖರ ಕೋಟ್ಯಾನ್, ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಬಿಲ್ಲವ ಮುಖಂಡ ಸೇಸಪ್ಪ ಕೋಟ್ಯಾನ್, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್ ಉಪಸ್ಥಿತರಿದ್ದರು.
Comments are closed.