ಮಂಗಳೂರು : ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಧ್ವನಿವರ್ಧಕ ಬಳಕೆ ಬಗ್ಗೆ ಸ್ಥಳಿಯರೊಬ್ಬರು ಮುಜರಾಯಿ ಇಲಾಖೆಗೆ ದೂರು ನೀಡಿರುವ ಪ್ರಕರಣದಿಂದ ವಿವಾದ ಏರ್ಪಟ್ಟಿದ್ದು, ಬಳಿಕ ಹಿಂದೂ ಸಂಘಟನೆಯ ಮುಖಂಡರು ಈ ಬಗ್ಗೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ದೂರುದಾರರು ದೂರನ್ನು ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಪ್ರಕರಣ ಸುಖಂತ್ಯ ಕಂಡಿತ್ತು.
ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಸುವುದರಿಂದ ಸುತ್ತಮುತ್ತಲಿನ ಮನೆಗಳಲ್ಲಿ ಇರುವವರಿಗೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರಾದ ಬ್ಲೇನಿ ಡಿಸೋಜ ಎಂಬವರು ಮೇಯರ್ ಹಾಗೂ ಮುಜರಾಯಿ ಇಲಾಖೆಗೆ ಆಕ್ಷೇಪಣಾ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿತ್ತು.
ಇದೇ ವೇಳೆ ಬ್ಲೇನಿ ಡಿಸೋಜ ಅವರು ಪರಿಸರದ ವ್ಯಕ್ತಿಗಳ ನಕಲಿ ಸಹಿ ಬಳಕೆ ಮಾಡಿರುವ ಬಗ್ಗೆ ಬ್ಲೇನಿ ಡಿಸೋಜರ ವಿರುದ್ಧ ಸ್ಥಳೀಯರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರ ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ ಬಳಿಕ ಬ್ಲೇನಿ ಡಿಸೋಜ ಅವರು ತಮ್ಮ ದೂರನ್ನು ವಾಪಸ್ಸು ಪಡೆದಿದ್ದರು.
ಆದರೆ ಇದೀಗ ಇದಕ್ಕೆ ಪ್ರತಿಯಾಗಿ ಬ್ಲೇನಿ ಡಿಸೋಜ ಅವರನ್ನು ಟೀಕಿಸಿ ಯುವಕರ ಗುಂಪೊಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.ತಮ್ಮನ್ನು ತಾವು ಜಾತ್ಯಾತೀತ ಕನ್ನಡಿಗರು ಎಂದು ಕರೆದುಕೊಂಡಿರುವ ಯುವಕರ ಗುಂಪೊಂದು ಕ್ರೈಸ್ತರು, ಹಿಂದೂಗಳು, ಕುಡ್ಲ ಸಂಸ್ಕೃತಿ ರಕ್ಷಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ :
ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ,
ಮಾನ್ಯರೇ,
ಮಂಗಳೂರು ಕದ್ರಿ ಗ್ರಾಮದಲ್ಲಿರುವ ಶ್ರೀಮಂಜುನಾಥ ದೇವಸ್ಥಾನವು ಸುಮಾರು ಹತ್ತು ಶತಮಾನಗಳಷ್ಟು ಪುರಾತನ ದೇವಸ್ಥಾನವಾಗಿದ್ದು ಸದರಿ ದೇವಾಲಯದಲ್ಲಿ ಸಾವಿರಾರು ವರ್ಷಗಳಿಂದ ನಿತ್ಯವೂ ಪೂಜೆ, ಪುನಸ್ಕಾರ, ಮಂತ್ರಘೋಷ, ಮಹಾ ಮಂಗಳಾರತಿ, ಘಂಟಾ ನಾದಗಳು ಮೊಳಗುತ್ತಿವೆ. ಮೊಸರು ಕುಡಿಕೆ, ದೀಪಾವಳಿ, ಭಜನೆ, ನೇಮ ವಾರ್ಷಿಕ ಜಾತ್ರೆ, ಯಕ್ಷಗಾನ ಮುಂತಾದವುಗಳೂ ತಲೆತಲಾಂತರದಿಂದ ನಡೆದುಕೊಂಡುಬರುತ್ತಿವೆ.
ಆದರೆ ಆ ನಂತರದಲ್ಲಿ ಸದರಿ ದೇವಾಲಯವಿರುವ ಕದ್ರಿ ಗ್ರಾಮಕ್ಕೆ ಎಲ್ಲಿಂದಲೋ ಕೆಲವು ಕ್ರಿಶ್ಚಿಯನ್ ಸಮುದಾಯದವರು ಬಂದು ನೆಲೆಸಿರುತ್ತಾರೆ.ಅವರುಗಳು ಏಕದೇವೋಪಾಸಕರಾಗಿರುವುದರಿಂದಾಗಿ ಹಿಂದೂ ದೇವರುಗಳಿಗೆ ನಡೆಯುವ ಹಲವಾರು ಬಗೆಯ ಪೂಜೆ ಪುನಸ್ಕಾರಗಳು ಕಿರಿಕಿರಿಯನ್ನುಂಟುಮಾಡುತ್ತಿದೆಯಷ್ಟೇ ಅಲ್ಲದೇ ಕೆಲವು ವಿಶೇಷ ದಿನಗಳಲ್ಲಿ ಎಂದರೆ ಮೊಸರು ಕುಡಿಕೆ, ದೀಪಾವಳಿ, ಭಜನೆ, ನೇಮ, ವಾರ್ಷಿಕ ಜಾತ್ರೆ, ಯಕ್ಷಗಾನ ಮುಂತಾದವುಗಳು ನಡೆಯುವ ಸಮಯದಲ್ಲಿ ತೀವ್ರ ತರದ ತೊಂದರೆಯಾಗುವುದುಂಟು.
ಕೆಲವೊಮ್ಮೆ ಧ್ವನಿವರ್ಧಕದಿಂದ ಹೊರಬರುವ ದೇವರ ನಾಮಗಳ ಶಬ್ದದಿಂದಾಗಿ ಅವರ ಕಿವಿಯ ತಮಟೆಯನ್ನಷ್ಟೇ ಅಲ್ಲದೇ ಎದೆಯನ್ನೂ ಸೀಳಿ ಹೃದಯವನ್ನೇ ಸ್ತಂಭನಗೊಳಿಸಿಬಿಡುತ್ತದೆ.
ಆದುದರಿಂದ ದೇವಾಲಯ ನಿರ್ಮಾಣವಾಗಿ ಹಲವಾರು ಶತಮಾನಗಳ ನಂತರ ಎಲ್ಲಿಂದಲೋ ಅಲ್ಲಿಗೆ ಬಂದು ದೇವಾಲಯದ ಸುತ್ತ ಮುತ್ತ ನೆಲೆಸಿರುವ ಕ್ರಿಶ್ಚಿಯನ್ ಧರ್ಮದವರನ್ನು ಆದಷ್ಟು ಬೇಗ ಅಲ್ಲಿಂದ ಬಹು ದೂರದ ಜಾಗಗಳಿಗೆ ಸ್ಥಳಾಂತರಿಸಿ ಅವರ ಪ್ರಾಣಗಳನ್ನು ಕಾಪಾಡುವುದರ ಜೊತೆಗೆ ಸಾವಿರಾರು ವರ್ಷಗಳ ಪುರಾತನ ದೇವಾಲಯದಲ್ಲಿ ನಡೆಯುತ್ತಿರುವ ಆಚರಣೆಗಳು ನಿರಾತಂಕವಾಗಿ ನೆರವೇರಲು ಅವಕಾಶ ಮಾಡಿಕೊಡಬೇಕೆಂದು ಎಲ್ಲಾ ಜಾತ್ಯತೀತ ಮನಸ್ಸುಗಳ ಪರವಾಗಿ ಕೋರುತ್ತಿದ್ದೇವೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಪ್ರವೀಣ್ ಕುಮಾರ್ ಮಾವಿನಕಾಡು ಮತ್ತು ಅಪಾರ ಜಾತ್ಯತೀತ ಕನ್ನಡಿಗರು.
Comments are closed.