ಮಂಗಳೂರು, ಜನವರಿ.2: ಪಿಲಿಕುಲ ಮಾನಸ ವಾಟರ್ ಪಾರ್ಕ್‌ಗೆ ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳೊಂದಿಗೆ ವಿಹಾರಕ್ಕೆ ಬಂದಿದ್ದ ವಿದ್ಯಾರ್ಥಿನಿಯರ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮೂವರನ್ನು ಕಾವೂರು ಠಾಣಾ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿರುವ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕಿನಲ್ಲಿ ವಿಹಾರಿಸಲು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅನ್ಯಕೋಮಿನ ಯುವಕರಿಬ್ಬರು ಬಂದಿದ್ದು, ಇವರನ್ನು ಬೆನ್ನಟ್ಟಿಕೊಂಡು ಬಂದ ಹಿಂದು ಸಂಘಟನೆ ಕಾರ್ಯಕರ್ತರಲ್ಲಿ ಒಬ್ಬ ಪೊಲೀಸರ ಸಮ್ಮುಖದಲ್ಲೇ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹಲ್ಲೆ ನಡೆಸಿದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೂ ಕೂಡ ಪ್ರಕರಣವನ್ನು ಕಾವೂರು ಪೊಲೀಸರು ಲಘುವಾಗಿ ಪರಿಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಮಧ್ಯೆಯೇ ನಗರದ ಹಿಂದೂ ವಕೀಲರೊಬ್ಬರ ಮಧ್ಯಪ್ರವೇಶದಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಬಂಧಿತರನ್ನು ಮೂಡುಶೆಡ್ಡೆಯ ಸಂಪತ್ ಶೆಟ್ಟಿ,ದಿನೇಶ್ ಹಾಗೂ ವರದ ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿ ಸಮೀಪದ ಐಕಳ ತಾಳಿಪ್ಪಾಡಿಯ ಕಾಲೇಜೊಂದರ ಇಬ್ಬರು ಪಿಯು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಗಳು ಮಂಗಳವಾರ ಬೆಳಗ್ಗೆ ಕಾರೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಪಿಲಿಕುಳ ನಿಸರ್ಗಧಾಮಕ್ಕೆ ಆಗಮಿಸಿದ್ದರು. ಪಿಲಿಕುಳದ ಮಾನಸ ವಾಟರ್ಪಾರ್ಕ್ನಲ್ಲಿ ಈ ವಿದ್ಯಾರ್ಥಿಗಳು ವಿಹರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ನಿಸರ್ಗಧಾಮದೊಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ವಿಹಾರಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕಾವೂರು ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ನಿಸರ್ಗಧಾಮದಿಂದ ಹೊರಗೆ ಕರೆದೊಯ್ಯಲು ಮುಂದಾದರು.
ವಿದ್ಯಾರ್ಥಿಗಳನ್ನು ನಿಸರ್ಗಧಾಮದಿಂದ ಹೊರಗೆ ಕರೆದೊಯ್ಯುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಪೊಲೀಸರ ಸಮ್ಮುಖದಲ್ಲೇ ವಿದ್ಯಾರ್ಥಿನಿಯೊಬ್ಬಳ ಕುತ್ತಿಗೆಗೆ ಹಲ್ಲೆ ನಡೆಸಿರುವ ದೃಶ್ಯವೊಂದು ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿತ್ತು. (ಅಂದರೆ ಈ ಎಲ್ಲ ದೃಶ್ಯಾವಳಿಯನ್ನು ಯಾರೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ) ಹಲ್ಲೆ ಮಾಡಿರುವ ವ್ಯಕ್ತಿ ಹಿಂದೂ ಜಾಗರಣಾ ವೇದಿಕೆಯ ಸ್ಥಳೀಯ ಕಾರ್ಯಕರ್ತ ಸಂಪತ್ ಶೆಟ್ಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಹಲ್ಲೆಗೊಳಗಾದ ವಿದ್ಯಾರ್ಥಿನಿಯ ತಾಯಿ ಮೆಲ್ಸಿ ಸೆರಾವೋ ನೀಡಿದ ದೂರಿನಂತೆ ಪೊಲೀಸರು ಸೆ. 341, 342, 324, 506, 509, 355, 153(ಎ), 74 (1) ಅನ್ವಯ ಪ್ರಕರಣ ದಾಖಲಿಸಿಕೊಂಡು ಹಿಂಜಾವೇ ಕಾರ್ಯಕರ್ತರಾದ ಮೂಡುಶೆಡ್ಡೆಯ ಸಂಪತ್ ಶೆಟ್ಟಿ, ವರದ, ದಿನೇಶ್ ಎಂಬವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಘಟನೆಯ ದೃಶ್ಯಾವಳಿಯನ್ನು ಆಧರಿಸಿ ಈ ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಂಗಳೂರು ನಗರ ಕಮಿಷನರೇಟ್ ಡಿಸಿಪಿ ಹನುಮಂತರಾಯ ಅವರು ಮಾಧ್ಯಮ ವೊಂದಕ್ಕೆ ತಿಳಿಸಿದ್ದಾರೆ.
ಅನ್ಯಕೋಮಿನ ಯುವಕರೊಂದಿಗೆ ವಿಹಾರಕ್ಕೆ ಬಂದಿದ್ದವಿಧ್ಯಾರ್ಥಿನಿಯ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ : ಲವ್ ಜಿಹಾದ್ ಆರೋಪ
Comments are closed.