ಕರಾವಳಿ

ನಾಳೆಯಿಂದ ಕದ್ರಿ ಉದ್ಯಾನವನದಲ್ಲಿ “ಫಲಪುಷ್ಪ ಪ್ರದರ್ಶನ” : ವಿಶೇಷ ವಿನ್ಯಾಸಗಳೊಂದಿಗೆ ಸಿಂಗಾರಗೊಂಡಿದೆ ಪಾರ್ಕ್

Pinterest LinkedIn Tumblr

ಮಂಗಳೂರು, ಜನವರಿ.25: ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಾಳೆಯಿಂದ ಫಲಪುಷ್ಪ ಪ್ರದರ್ಶನ (ಜ. 26ರಿಂದ 29ರವರೆಗೆ) ಆರಂಭಗೊಳ್ಳಲ್ಲಿದ್ದು, ಎಲ್ಲಾ ರೀತಿಯ ಸಿದ್ದತೆಗಳು ನಡೆದಿವೆ.

ಕದ್ರಿ ಪಾರ್ಕ್ ನಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಅವರು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಫಲಪುಷ್ಪ ಪ್ರದರ್ಶನವನ್ನು ಜ. 26ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಈ ವರ್ಷದ ಪ್ರದರ್ಶನದಲ್ಲಿ ಮಂಗಳೂರು ಕ್ಲಾಕ್ ಟವರ್ ಹೂ ವಿನ್ಯಾಸ ಮಾದರಿ ನಿರ್ಮಿಸಲಾಗುತ್ತಿದ್ದು, ಅದರ ಉದ್ಘಾಟನೆಯನ್ನು ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಪ್ರಗತಿಪರ 5 ಮಂದಿ ಮಹಿಳೆಯರು, ಸಣ್ಣ, ಅತೀ ಸಣ್ಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ತೋಟಗಾರಿಕಾ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು. ಜ.26ರಂದು ಸಾರ್ವಜನಿಕರಿಗೆ ಹೂ ಜೋಡಣೆ, ಪುಷ್ಪರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅಂದು ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ ಎಂದು ಅವರು ಹೇಳಿದರು.

ಶಾಲಾ ಶಿಕ್ಷಕರೊಂದಿಗೆ ಬರುವ ಶಾಲಾ ಮಕ್ಕಳಿಗೆ, ವಿಕಲಚೇತನರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ. ಉಳಿದಂತೆ ಹಿರಿಯರಿಗೆ 20 ರೂ. ಹಾಗೂ ಮಕ್ಕಳಿಗೆ 10 ರೂ. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ. ಪ್ರದರ್ಶನ ಈ ನಾಲ್ಕು ದಿನಗಳ ಅವಧಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9.30ರವರೆಗೆ ತೆರೆದಿರುತ್ತದೆ ಎಂದು ಡಾ. ಎಂ.ಆರ್. ರವಿ ಹೇಳಿದರು.

ಪ್ರದರ್ಶನದಲ್ಲಿ ಜೇನು ಬೇಸಾಯ ಬಗ್ಗೆ ಮಾಹಿತಿ ಹಾಗೂ ಜೇನಿನ ವೌಲ್ಯವರ್ಧಿತ ಉತ್ಪನ್ನಗಳ ಮಾರಾಟ, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿಕೆ, ಔಷಧಿ ಗಿಡಗಳ ಪ್ರದರ್ಶನ, ವಿವಿಧ ಅಭಿವೃದ್ಧಿ ಇಲಾಖೆಗಳ ಪ್ರದರ್ಶನ ಮಳಿಗೆಗಳು, ತೋಟಗಾರಿಕಾ ಇಲಾಖೆಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯ ಹೂ, ತರಕಾರಿಗಳ ಪ್ರದರ್ಶನ, ಬೊನ್ಸಾಯಿ, ಅಂಥೂರಿಯಂ, ಆರ್ಕಿಡ್ ಗಿಡಗಳು ಹಾಗೂ ಇತರ ಆಕರ್ಷಕ ಗಿಡಗಳ ಪ್ರದರ್ಶನ ನಡೆಯಲಿದೆ.

ಇದಲ್ಲದೆ ಸುಮಾರು 70 ಮಳಿಗೆಗಳಲ್ಲಿ ವಿವಿಧ ಕೃಷಿಗೆ ಉಪಯೋಗಿಸುವ ಉಪಕರಣಗಳು, ಸ್ವಸಹಾಯ ಗುಂಪುಗಳ ವಿವಿಧ ವಸ್ತುಗಳು, ಸ್ಥಳೀಯ ಖಾದ್ಯಗಳ ಮಳಿಗೆಗಳೂ ಪ್ರದರ್ಶನದಲ್ಲಿ ಇರಲಿವೆ. ಪ್ರದರ್ಶನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಉದ್ಯಾನವನದ ಹೊರಗಡೆ ಸಜ್ಜುಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಉದ್ಯಾನವನ ಹಾಗೂ ಸಂಗೀತ ಕಾರಂಜಿ ನಡುವಿನ ರಸ್ತೆಯಲ್ಲಿ ಪ್ರದರ್ಶನದ ಅವಧಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಈ ಬಗ್ಗೆ ನಗರ ಸಂಚಾರಿ ಪೊಲೀಸರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಡಾ. ಎಂ.ಆರ್. ರವಿ ಅವರು ವಿವರಿಸಿದರು.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯ್ಕಿ, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷ ಡಾ. ಭಾರತೀ ನಿರ್ಮಲ್, ಕೋಶಾಧಿಕಾರಿ ಪಿ. ಸುರೇಶ್ ಶೆಣೈ, ಜತೆ ಕಾರ್ಯದರ್ಶಿ ಅನಂತರಾಮ ಹೇರಳೆ, ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮೀ ರಾವ್ ಆರೂರು, ಎನ್.ವಿ.ಕೆ. ಭಟ್ರಕೋಡಿ, ಶಾರದಾ ಆಚಾರ್, ಶಶಿ ವಿ. ಶೆಟ್ಟಿ, ವಿಜಯಲಕ್ಷ್ಮೀ ಆರ್.ರಾವ್, ಸುಭಾಶ್ಚಂದ್ರ ರೈ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.