ಯುವಜನರು ಕೋಮುವಾದಿ ಸಂಘಟನೆಗಳ ಕಾಲಾಳುಗಳಾಗಿ ಬಲಿಪಶುಗಳಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಾಗೃತಿ ಅಗತ್ಯ : ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು
ಮಂಗಳೂರು, ಜನವರಿ 31: ರಾಜ್ಯದ ವಿವಿಧ ಸಂಘಟನೆಗಳು ಸೌಹಾರ್ದತೆಗಾಗಿ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಸೌಹಾರ್ದ ಕರ್ನಾಟಕ ಸಮಿತಿ ವತಿಯಿಂದ ವಿವಿಧ ಸಂಘಟನೆಗಳ ಅಶ್ರಯದಲ್ಲಿ ಮಂಗಳವಾರ ಮಂಗಳೂರಿನಲ್ಲೂ “ಸೌಹಾರ್ದತೆಗಾಗಿ ಮಾನವ ಸರಪಳಿ” ಹಾಗೂ ಸೌಹಾರ್ದ ಸಮಾವೇಶ ನಡೆಯಿತು.
ರಾಜ್ಯದ ವಿವಿಧ ಸಂಘಟನೆಗಳು ಸೌಹಾರ್ದತೆಗಾಗಿ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮದ ದ.ಕ. ಜಿಲ್ಲೆಯ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದ ಪುರಭವನ ಮುಂಭಾಗದಿಂದ ಎ.ಬಿ. ಶೆಟ್ಟಿ ವೃತ್ತ, ನೆಹರು ಮೈದಾನ ಸೇರಿದಂತೆ ಪುರಭವನದ ಇನ್ನೊಂದು ಬದಿಯ ಸುತ್ತ ಸುಮಾರು ಎರಡು ಕಿಲೋಮೀಟರ್ ಮಾನವ ಸರಪಳಿ ನಿರ್ಮಿಸಲಾಗಿತ್ತು.
ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡ ಸೌಹಾರ್ದ ಸಮಾವೇಶವನ್ನುದ್ದೇಶಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು, ಸೂಕ್ತ ಉದ್ಯೋಗವಿಲ್ಲದೇ ಯುವಜನರು ಕೋಮುವಾದಿ ಸಂಘಟನೆಗಳ ಕಾಲಾಳುಗಳಾಗಿ ಬಲಿಪಶುಗಳಾಗುವುದನ್ನು ತಪ್ಪಿಸಬೇಕಾಗಿದೆ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಹಳತಾಗುತ್ತಿರುವಂತೆ. ಭಯದ ವಾತಾವರಣವನ್ನು ಸೃಷ್ಟಿಸುವ ಹೊಸ ತಂತ್ರಗಾರಿಕೆ ನಡೆಯುತ್ತಿದೆ. ಇದರ ಭಾಗವಾಗಿ ಗೌರಿ ಹತ್ಯೆ ನಡೆದಿದೆ. ಅದನ್ನು ಸಾಕಷ್ಟು ಮಂದಿ ಸಂಭ್ರಮಿಸಿದವರೂ ಇದ್ದಾರೆ. ದೇವರುಗಳನ್ನು ಚುನಾವಣಾ ಪೋಸ್ಟರ್ಗಳಲ್ಲಿ ಬಳಸುವವರನ್ನು ದೂರಮಾಡಬೇಕಾಗಿದೆ. ಮನೆಯಿಲ್ಲದವರಿಗೆ ಮನೆ, ಬಡವರಿಗೆ ಅನ್ನ, ಮಕ್ಕಳಿಗೆ ಹಾಲು ನೀಡುವುದು ಧರ್ಮ ವಾಗಬೇಕಾಗಿದೆ. ಹಿಂದೂ ಧರ್ಮದ ಒಳಗಿರುವ ಅಸಮಾನತೆಯನ್ನು ನೀಗಿಸಲು ಸಾಧ್ಯವಾಗದವರು ಸಮಾನ ನಾಗರಿಕ ಸಂಹಿತೆ ತರುತ್ತೇವೆ ಎನ್ನುತ್ತಾರೆ. ಮುಸ್ಲಿಂ ಸಮುದಾಯ ಬಗ್ಗೆ ಸಾಚಾರ ವರದಿಯಲ್ಲಿ ತಿಳಿಸಿದಂತಹ ಸಾಕಷ್ಟು ಸಮಸ್ಯೆಗಳಿದ್ದರೂ ಆ ವರದಿಯನ್ನು ಜಾರಿಗೆ ತರುವ ಬಗ್ಗೆ ಆಸಕ್ತಿ ವಹಿಸದೆ ತಲಾಖ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸಲು ಈ ರೀತಿಯ ತಂತ್ರಗಾರಿಕೆ ನಡೆಯುತ್ತಿದೆ. ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯವಾಗಿ ಉದ್ಯೋಗ ಕ್ಷೇತ್ರದಲ್ಲಾಗಲಿ ಪ್ರಾತಿನಿಧ್ಯ ನೀಡಿಲ್ಲ. ಕೇವಲ ಜೈಲಿನಲ್ಲಿ ಅವರ ಜನಸಂಖ್ಯೆಯ ಅನುಪಾತಕ್ಕಿಂತಲೂ ಅಧಿಕ ಪ್ರಾತಿನಿಧ್ಯ ಸಿಗುವ ವಾತಾವರಣವನ್ನು ನಿರ್ಮಿಸಲಾಗಿದೆ. ಈ ವಾತಾವರಣ ಬದಲಾಗಬೇಕಾಗಿದೆ. ಜನರ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಾಗಿದೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ಮಾನವ ಸರಪಳಿ ಜಿಲ್ಲೆಯ ಎಲ್ಲರನ್ನು ಮಾನವೀಯತೆಯ ನೆಲೆಯಲ್ಲಿ ಒಂದು ಗೂಡಿಸಿರುವುದು ಉತ್ತಮ ಸಂದೇಶ ಎಂದು ವಂ. ಓನಿಲ್ ಡಿಸೋಜ ಹೇಳಿದರು.
ಯುವಜನರು ತಪ್ಪು ದಾರಿಯಲ್ಲಿ ಸಾಗದಂತೆ ನಮ್ಮ ಹಿರಿಯರು ತೋರಿಸಿದ ಸಮಾನತೆ, ನೈತಿಕತೆ ಮಾನವೀಯತೆ ದಾರಿಯಲ್ಲಿ ಸಾಗೋಣ ಎಂದು ಚಂದ್ರಕಲಾ ನಂದಾವರ ಹೇಳಿದರು.
ಸೌಹಾರ್ದ ಕರ್ನಾಟಕ ಸಮಿತಿಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ರಾಜ್ಯದ 500 ಕೇಂದ್ರಗಳಲ್ಲಿ ಹಮ್ಮಿಕೊಂಡ ಮಾನವ ಸರಪಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದು ಚಳವಳಿಯಾಗಲಿ ಎಂದರು.
ಸಮಾರಂಭದಲ್ಲಿ ವಾಸುದೇವ ಬೋಳೂರು, ಸಿಪಿಐ (ಎಂ) ಹಿರಿಯ ಮುಖಂಡ ಕೆ.ಆರ್. ಶ್ರೀಯಾನ್, ಮಾನಪಾ ಮೇಯರ್ ಕವಿತಾ ಸನಿಲ್, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಪಿ.ಬಿ.ಡೇಸಾ, ನಿರ್ಮಲ್ ಕುಮಾರ್, ಕಬೀರ್ ಉಳ್ಳಾಲ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಮೇಯರ್ ಕೆ.ಆಶ್ರಫ್, ಕೇಶವ ಧರಣಿ, ಎಂ. ದೇವದಾಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಪ್ರಧಾನ ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಹನೀಫ್, ಖಾಲಿದ್ ಉಜಿರೆ ಮೊದಲದವರು ಪಾಲ್ಗೊಂಡರು. ಸೌಹಾರ್ದ ಕರ್ನಾಟಕ ಸಮಿತಿಯ ಜಿಲ್ಲಾ ಸಂಚಾಲಕರಾದ ಮುನೀರ್ ಕಾಟಿಪಳ್ಳ ಸ್ವಾಗತಿಸಿದರು.
Comments are closed.