ಕರಾವಳಿ

ಝೈಬುನ್ನಿಸಾ ಹಾಗೂ ರಚನಾಳ ಅಸಹಜ ಸಾವಿನ ಸಮಗ್ರ ತನಿಖೆಗೆ ಡಬ್ಲ್ಯೂಐಎಂ ಆಗ್ರಹ

Pinterest LinkedIn Tumblr

ಮಂಗಳೂರು,ಫೆಬ್ರವರಿ.1: ಉಪ್ಪಿನಂಗಡಿಯ ವಿದ್ಯಾರ್ಥಿನಿ ಝೈಬುನ್ನಿಸಾ ಹಾಗೂ ಆಳ್ವಾಸ್ ಕಾಲೇಜಿನ ರಚನಾಳ ಅಸಹಜ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ (ಡಬ್ಲ್ಯೂಐಎಂ) ಬುಧವಾರ ಮಂಗಳೂರಿನಲ್ಲಿ ಧರಣಿ ನಡೆಸಿತು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣ ಮುಂದೆ ನಡೆದ ಧರಣಿಯನ್ನುದ್ದೇಶಿಸಿ ಡಬ್ಲ್ಯೂಐಎಂ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿದರು. ವಿದ್ಯಾರ್ಥಿನಿಯರಾದ ಝೈಬುನ್ನಿಸಾ ಹಾಗೂ ರಚನಾಳ ಅಸಹಜ ಸಾವನ್ನು ತೀವ್ರವಾಗಿ ಖಂಡಿಸುತ್ತೇವೆ. ವಿದ್ಯಾರ್ಥಿನಿಯರಾದ ಝೈಬುನ್ನಿಸಾ ಹಾಗೂ ರಚನಾ ಸಾವಿನ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಅವರು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿದೆ. ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯವು ದಿನನಿತ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಅನಿವಾರ್ಯತೆಯಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜಾದ್ಯಂತ ವಿದ್ಯಾರ್ಥಿನಿಯರ ನಿಗೂಢ ಸಾವು ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಉಪ್ಪಿನಂಗಡಿ ಮೂಲದ ವಿದ್ಯಾರ್ಥಿನಿ ಝೈಬುನ್ನಿಸಾ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ರಚನಾ ಕಾಲೇಜಿನ 5ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಆದರೆ, ವಿದ್ಯಾರ್ಥಿನಿಯರ ಪೋಷಕರು ಆತ್ಮಹತ್ಯೆಯನ್ನು ಅಲ್ಲಗಳೆಯುತ್ತಿದ್ದಾರೆ. ಆದ್ದರಿಂದ ಸರಕಾರ ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದರು.

ಡಬ್ಲ್ಯೂಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ ಹಾಗೂ ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಮೈಮುನಾ ಪುತ್ತೂರು ಮಾತನಾಡಿ, ವಿದ್ಯಾರ್ಥಿನಿಯರ ನಿಗೂಢ ಸಾವು ಪ್ರಕರಣಗಳನ್ನು ಸರಕಾರ ಸಮಗ್ರ ತನಿಖೆಗೆ ಒಳಪಡಿಸಬೇಕು. ಕುಟುಂಬಗಳಿಗೆ ಪರಿಹಾರವನ್ನು ಒದಗಿ ಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಡಬ್ಲ್ಯೂಐಎಂನ ದ.ಕ. ಜಿಲ್ಲಾ ಕೋಶಾಧಿಕಾರಿ ಸಜರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಬ್ಲ್ಯೂಐಎಂ ಜಿಲ್ಲಾ ಕಾರ್ಯದರ್ಶಿ ಸಮೀನಾ ಮಲಾರ್ ವಂದಿಸಿದರು. ಡಬ್ಲ್ಯೂಐಎಂನ ಜಿಲ್ಲಾ ಸಮಿತಿ ಸದಸ್ಯೆ ಝರೀನಾ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು.

Comments are closed.