ಕರಾವಳಿ

ರಾಷ್ಟ್ರದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯ ದಿಟ್ಟ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Pinterest LinkedIn Tumblr

ಮಂಗಳೂರು : 2014ರ ಚುನಾವಣೆಯ ಸಂದೇಶವಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ಆರಂಭವಾದ ಮೋದಿ ಸರ್ಕಾರದ ಸಮಗ್ರ ಬದಲಾವಣೆಯ ಸಿದ್ಧಾಂತ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಧ್ಯೇಯದೊಂದಿಗೆ ಗ್ರಾಮೀಣ ಜನತೆ, ಕೃಷಿ ಬದುಕು, ಹಿರಿಯ ನಾಗರಿಕರು, ಸಣ್ಣ ಅತಿ ಸಣ್ಣ, ಮಧ್ಯಮ ಗಾತ್ರದ ಉದ್ಯಮಿಗಳು, ಪೂರ್ವ ಪ್ರಾಥಮಿಕ ದಿಂದ ಪದವಿಪೂರ್ವ ಶಿಕ್ಷಣದವರೆಗೆ ಸಮಗ್ರ ಶಿಕ್ಷಣ ನೀತಿ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಮೇಕ್ ಇನ್ ಇಂಡಿಯಾ ಕಲ್ಪನೆಗೆ ಒತ್ತು ನೀಡುವ ವಿಶಿಷ್ಟ ಕಲ್ಪನೆಯೊಂದಿಗೆ ಪ್ರಾಮಾಣಿಕ ಹಣಕಾಸು ಸಚಿವರಾದ ಸನ್ಮಾನ್ಯ ಶ್ರೀ ಅರುಣ್ ಜೇಟ್ಲಿಯವರಿಂದ ನೀಡಲ್ಪಟ್ಟ ಪ್ರಾಮಾಣಿಕ ಬಜೆಟ್‌ನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

2022ರೊಳಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಯೋಜನೆ, ಖಾರೀಫ್ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ, ಸಾವಯವ ಕೃಷಿಗೆ ಆದ್ಯತೆ ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವ್ಯಾಪಕ ಅನುಷ್ಠಾನ ಕೃಷಿಕರ ಬದುಕಿನಲ್ಲಿ ಭರವಸೆಯ ಬೆಳಕು ನೀಡಿದೆ.

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಅನ್ವಯ 10 ಕೋಟಿ ಬಡ ಹಾಗೂ ಅಶಕ್ತ ಕುಟುಂಬದ ಸುಮಾರು 50 ಕೋಟಿ ಜನತೆಯನ್ನು ತಲುಪಲಿರುವ ವಾರ್ಷಿಕ ರೂ. 5.00 ಲಕ್ಷ ಮೊತ್ತದ ಆರೋಗ್ಯ ವಿಮೆ ಕಲ್ಪನೆ ಹೊಂದಿರುವ ಯುನಿವರ್ಸಲ್ ಹೆಲ್ತ್ ಸ್ಕೀಮ್ ಜಗತ್ತಿನಲ್ಲೆ ಒಂದು ವಿಶಿಷ್ಟ ದಾಖಲೆ ಎನಿಸಿದೆ. ಸುಮಾರು 1200 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಾದ್ಯಂತ ಸ್ಥಾಪಿಸಲು ಉದ್ದೇಶಿಸಿರುವ 12,500 ಹೆಲ್ತ್ ಅಂಡ್ ವೆಲ್‌ನೆಸ್ ಸೆಂಟರ್ ಗಳು ಸರ್ಕಾರದ ವಿಶಿಷ್ಟ ಕಲ್ಪನೆಯಾಗಿವೆ.

ಹಿರಿಯ ನಾಗರಿಕರಿಗೆ ನೀಡಲಾಗಿರುವ ಅನೇಕ ಸೌಲಭ್ಯಗಳು ಹಾಗೂ ಆದಾಯ ತೆರಿಗೆಯಲ್ಲಿ ನೀಡುವ ರಿಯಾಯಿತಿ ಹಿರಿಯರ ಬದುಕನ್ನು ಸುಧಾರಿಸಲಿದೆ. ಮೂಲಭೂತ ಸೌಕರ್ಯಗಳಾದ ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಹಾಗೂ ರೈಲ್ವೆಗಳಿಗೆ ನೀಡಿರುವ ಆದ್ಯತೆ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಉದ್ಯೋಗ ಸೃಷ್ಠಿಗೆ ಇಂಬು ನೀಡಲಿದೆ.

ಬೆಂಗಳೂರು ನಗರ ಸಾರಿಗೆ ಸಮಸ್ಯೆಗೆ ಪರಿಹಾರಕ್ಕಾಗಿ ಸುಮಾರು ರೂ. 17,000 ಕೋಟಿ ವೆಚ್ಚದಲ್ಲಿ ನೀಡಿರುವ ಮೆಟ್ರೊ ಸಬ್ ಅರ್ಬನ್ ಯೋಜನೆ ಗೆ ರಾಜ್ಯದ ಪಾಲಿಗೆ ಬಂಪರ್ ಕೊಡುಗೆಯಾಗಿದೆ. 2019ರ ಚುನಾವಣೆ ಎದುರಿಸಲು ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೋಷಿಸದೆ ರಾಷ್ಟ್ರದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ನೀಡಿರುವ ದಿಟ್ಟ ಬಜೆಟ್‌ನ್ನು ಮುಕ್ತ ಕಂಠದಿಂದ ಸ್ವಾಗತಿಸುತ್ತೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.