ಕರಾವಳಿ

ಯುವಜನರಿಗೆ ನಿರಾಶೆ ತಂದ ಬಜೆಟ್ : ಮುನೀರ್ ಕಾಟಿಪಳ್ಳ ವಿಷಾದ

Pinterest LinkedIn Tumblr

ಮಂಗಳೂರು, ಫೆಬ್ರವರಿ :01: ಕೇಂದ್ರ ಸರಕಾರ ಗುರುವಾರ ಮಂಡಿಸಿದ ಬಜೆಟ್ ಯುವಜನರ ಪಾಲಿಗೆ ನಿರಾಶದಾಯಕವಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪ್ರಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಡಿಯಾಗಬೇಕು. ಆದರೆ ನೋಟ್ ಬ್ಯಾನ್, ಜಿಎಸ್ ಟಿ ಯಂತಹ ನೀತಿಗಳಿಂದ ಹೊಸ ಉದ್ಯೋಗಗಳ ಸೃಷ್ಟಿಯ ಬದಲಿಗೆ ಲಕ್ಷಗಟ್ಟಲೆ ಉದ್ಯೋಗ ನಷ್ಟಗೊಂಡಿದೆ. ಇಂತಹ ಸಂದರ್ಭದಲ್ಲಿ ಈ ಬಾರಿಯ ಬಜೆಟ್ ನಲ್ಲಾದರು ಉದ್ಯೋಗ ಸೃಷ್ಟಿಯ, ಸ್ವ ಉದ್ಯೋಗದ ಯೋಜನೆಗಳನ್ನು ಸರಕಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಯುವಜನರಿಗೆ ಮೋದಿ ಸರಕಾರ ಮಂಡಿಸಿದ ಬಜೆಟ್ ನಿರಾಶೆ ತಂದಿದೆ ಎಂದು ಹೇಳಿದರು.

ಯುವಜನರ ಭವಿಷ್ಯವನ್ನು ಕರಾಳಗೊಳಿಸಿದೆ, ಉದ್ಯೋಗ ಸೃಷ್ಟಿಯ ಬದಲಿಗೆ ಕಾರ್ಪೊರೇಟ್ ಜಗತ್ತಿಗೆ ರಿಯಾಯಿತಿಗಳನ್ನು ಮುಂದುವರಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸುವ ಕೃಷಿಯನ್ನು ಕಡೆಗಣಿಸಿದೆ. ಸಣ್ಣ ಕೈಗಾರಿಕೆ, ಉದ್ಯಮಗಳ ಉಸಿರುಗಟ್ಟಿಸುವ ನೀತಿ ಮುಂದುವರಿದಿದೆ. ಒಟ್ಟಾರೆ ದೇಶದ ದುಡಿಯುವ ಜನಗಳ, ಯುವಜನರ ಪಾಲಿಗೆ ಬಜೆಟ್ ಆತಂಕಕಾರಿಯಾಗಿದೆ ಎಂದು ಅವರು ತಿಳಿಸಿದರು.

ಕರಾವಳಿ ಭಾಗದ ಆರ್ಥಿಕತೆ ನಿಂತಿದೆ. ಮೀನುಗಾರಿಕೆ, ಗಲ್ಫ್ ರಾಷ್ಟ್ರಗಳ ಉದ್ಯೋಗ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಕರಾವಳಿಯ ಲಕ್ಷಾಂತರ ಯುವ ಜನರು ಇಲ್ಲಿನ ಆರ್ಥಿಕತೆಯನ್ನು ಕಟ್ಟಿದ್ದಲ್ಲದೆ, ದೇಶದ, ವಿದೇಶಿ ವಿನಿಮಯಕ್ಕೆ ಬಹು ದೊಡ್ಡ ಶಕ್ತಿ ತುಂಬಿದ್ದಾರೆ. ಅಂತಹ ಗಲ್ಫ್ ಉದ್ಯೋಗಿಗಳು ಬಿಕ್ಕಟ್ಟಿ ನಲ್ಲಿದ್ದು, ಅಲ್ಲಿನ ಸರಕಾರಗಳ ಹೊಸ ನೀತಿಗಳಿಂದ ಅವರು ಉದ್ಯೋಗ ಕಳೆದುಕೊಂಡು ಬರಿಗೈಯಲ್ಲಿ ಊರಿಗೆ ಮರಳುತ್ತಿದ್ದಾರೆ.

ಅಂತಹ ಸಂತ್ರಸ್ತ ಯುವ ಜನರಿಗೆ ಉದ್ಯೋಗ, ವ್ಯಾಪಾರದ ಮೂಲಕ ಬದುಕು ಕಟ್ಟಿಕೊಳ್ಳಲು ಈ ಬಾರಿಯ ಬಜೆಟ್ ನಲ್ಲಿ ಯೋಜನೆಗಳು ಘೋಷಣೆಯಾಗಬಹುದು ಎಂಬ ಗಲ್ಫ್ ಉದ್ಯೋಗಿ ಗಳ ನಿರೀಕ್ಷೆ ಹುಸಿಯಾಗಿದೆ. ಹಾಗೆಯೇ ಬಿಕ್ಕಟ್ಟಿನಲ್ಲಿರುವ ಬೀಡಿ ಉದ್ಯಮ, ಮೀನುಗಾರಿಕೆಯ ಬಗ್ಗೆ ಬಜೆಟ್ ಮೌನ ವಹಿಸಿರುವುದು ಕರಾವಳಿಯ ಜನರ ಬದುಕಿನ ಗಾಯದ ಮೇಲೆ ಬರೆ ಎಳೆದಿದೆ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.