ಅಬ್ದುಲ್ ಬಶೀರ್
ಮಂಗಳೂರು ಫೆಬ್ರವರಿ.6: ನಗರದ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಬಳಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಆಕಾಶ ಭವನದ ಅಬ್ದುಲ್ ಬಶೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೋಲೀಸರು ಮತ್ತೊರ್ವ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳದ ಕೇಪು ಗ್ರಾಮದ ಅಭಿ ಯಾನೆ ಅಭಿಷೇಕ್ ಆರ್.ಎಸ್. (21) ಎಂದು ಗುರುತಿಸಲಾಗಿದೆ. ಬಶೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇದೀಗ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಕಾವೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿತ್ತು. ಸೋಮವಾರ ಆರೋಪಿಯನ್ನು ಪೊಲೀಸರು ಪುತ್ತೂರಿನ ಬನ್ನೂರು ಎಂಬಲ್ಲಿಂದ ಬಂಧಿಸಿದ್ದಾರೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಕಾವೂರು ಪೊಲೀಸ್ ಠಾಣೆ ನಿರೀಕ್ಷಕ ಕೆ.ಆರ್.ನಾಯ್ಕೆ, ಸಿಬ್ಬಂದಿಗಳಾದ ಯಶವಂತ ಗೌಡ, ದುರ್ಗಾ ಪ್ರಸಾದ್ ಶೆಟ್ಟಿ, ವಿಶ್ವನಾಥ, ರಾಜಶೇಖರ ಗೌಡ, ಪ್ರಮೋದ್ ಎ.ಎಸ್., ಕೇಶವ, ಚೆರಿಯಾನ್, ರಶೀದ್ ಶೇಖ್, ವಿನಯ ಕುಮಾರ್ ಎಚ್.ಕೆ. ಅವರು ಪಾಲ್ಗೊಂಡಿದ್ದರು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಪೊಲೀಸರು ಕಿಶನ್ ಪೂಜಾರಿ, ಶ್ರೀಜಿತ್, ಧನುಷ್ ಪೂಜಾರಿ, ಸಂದೇಶ್ ಕೋಟ್ಯಾನ್, ಪುಷ್ಪರಾಜ್ ಮತ್ತು ಲತೇಶ್ ಎಂಬವರನ್ನು ಬಂಧಿಸಿದ್ದರು.
ಜನವರಿ 3ರಂದು ಕೊಟ್ಟಾರ ಚೌಕಿ ಬಳಿ ತನ್ನ ಪಾಸ್ಟ್ ಪುಡ್ ಅಂಗಡಿಯನ್ನು ಬಂದ್ ಮಾಡುತ್ತಿದ್ದ ಸಂದರ್ಭದಲ್ಲಿ ಅಬ್ದುಲ್ ಬಶೀರ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾಡಿದ್ದರು. ನಂತರ ಬಶೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಬಶೀರ್ ಮೃತಪಟ್ಟಿದ್ದರು
Comments are closed.