ಮಂಗಳೂರು ಫೆಬ್ರವರಿ 6: ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್‍ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು, ಮಲ್ಟಿಪ್ಲೆಕ್ಸ್ ಮತ್ತು ಏಕತೆರೆ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಟ ಮಿತಿಯನ್ನು ತೆರಿಗೆ ಹೊರತುಪಡಿಸಿ ರೂ. 200 ನಿಗದಿ ಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸಿನಿಮಾ ಮಂದಿರಗಳಲ್ಲಿ ಪ್ರವೇಶ ದರದ ಗರಿಷ್ಟ ಮಿತಿಯನ್ನು ನಿಗದಿಪಡಿಸಿರುವುದರ ವಿರುದ್ದ ರಾಜ್ಯ ಹೈಕೋರ್ಟ್‍ನಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರರು ದಾವೆ ಹೂಡಿದ್ದು, ನ್ಯಾಯಾಲಯವು ಶನಿವಾರ, ಭಾನುವಾರ, ಹಾಗೂ ರಾಜ್ಯ ಸರಕಾರದ ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಆದೇಶದಲ್ಲಿ ನಿಗದಿಪಡಿಸಿರುವ ದರ ಅನ್ವಯಿಸಿ ಹೈಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್ ಮತ್ತು ಏಕತೆರೆ ಸಿನಿಮಾ ಮಂದಿರಗಳ ಗರಿಷ್ಠ ಪ್ರವೇಶ ದರವನ್ನು ತೆರಿಗೆ ಹಾಗೂ ಇತರ ರಜಾದಿನಗಳನ್ನು ಹೊರತುಪಡಿಸಿ 200 ರೂ ಗಳಿಗಿಂತ ಹೆಚ್ಚಿನ ದರ ವಿಧಿಸದಂತೆ ಸರ್ಕಾರವು ಆದೇಶ ನೀಡಿದೆ.
ಈ ಗರಿಷ್ಟ ಮಿತಿಯು ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಗಳ ಚಲನಚಿತ್ರಗಳಿಗೆ ಅನ್ವಯಿಸುತ್ತದೆ. ಆದರೆ ಮಲ್ಟಿಪ್ಲೆಕ್ಸ್ ಗಳಲ್ಲಿನ ಗೋಲ್ಡ್ ಕ್ಲಾಸ್ ಸ್ಕ್ರೀನ್ ಹಾಗೂ ಗೋಲ್ಡ್ ಕ್ಲಾಸ್ ಸೀಟ್‍ಗಳನ್ನು ಹಾಗೂ ಐ-ಮ್ಯಾಕ್ಸ್ ಮತ್ತು 4ಡಿಎಕ್ಸ್ ಚಿತ್ರಮಂದಿರಗಳನ್ನು ರೂ. 200ರ ಗರಿಷ್ಠ ಪ್ರವೇಶ ದರ ಮಿತಿಯಿಂದ ಹೊರತುಪಡಿಸಲಾಗಿದೆ.
Comments are closed.