ಕರಾವಳಿ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ನಿರ್ಮಾಣಗೊಂಡಿರುವ ದೇಶದ ಪ್ರಥಮ 3ಡಿ ಹೈಬ್ರಿಡ್ ತಾರಾಲಯ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ಮಾರ್ಚ್.01: ಮಂಗಳೂರು ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಭಾರತದ ಪ್ರಥಮ ‘ಸ್ವಾಮಿ ವಿವೇಕಾನಂದ’ ತ್ರಿಡಿ 8ಕೆ ಹೈಬ್ರಿಡ್ ತಾರಾಲಯ ವನ್ನು ಗುರುವಾರ ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಲೋಕಾರ್ಪಣೆ ಗೊಳಿಸಿದರು.

ಇದೇ ಸಂದರ್ಭದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ದಲ್ಲಿ ‘ನಾವು ನಕ್ಷತ್ರಗಳು’ ಎಂಬ ತ್ರಿಡಿ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಿಲಿಕುಳದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗುತ್ತಿದ್ದು, ರಾಜ್ಯಪಾಲರ ಅಂಕಿತವಾದ ಕ್ಷಣ ಪ್ರಾಧಿಕಾರ ಕಾರ್ಯಾರಂಭಿಸಲಿದೆ ಎಂದು ಹೇಳಿದರು. ಪ್ರಾಧಿಕಾರದ ಮೂಲಕ ಪಿಲಿಕುಳವು ಸಮಗ್ರ ಅಭಿವೃದ್ಧಿಯೊಂದಿಗೆ ಆಕರ್ಷಕ ಪ್ರವಾಸಿ ತಾಣವಾಗಿ ಇನ್ನಷ್ಟು ಹೆಚ್ಚಿನ ಬೆಳವಣಿಗೆಯನ್ನು ಕಾಣಲಿದೆ. ಮುಂದಿನ ಎರಡು ತಿಂಗಳೊಳಗೆ ಪಿಲಿಕುಳದೊಳಗೆ ಪ್ರವಾಸಿಗರಿಗೆ ಸಂಚರಿಸಲು ಇಲೆಕ್ಟ್ರಿಕಲ್ ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಸಚಿವ ಎಂ.ಆರ್. ಸೀತಾರಾಂ ಹೇಳಿದರು.

ಈ ಹಿಂದಿನ ಸರಕಾರದಿಂದ 11 ಕೋಟಿ ರೂ.ಗಳ ಬಿಡುಗಡೆಯೊಂದಿಗೆ 2013ರವರೆಗೆ ಕಾಗದ ಪತ್ರದಲ್ಲಿದ್ದ 3ಡಿ ತಾರಾಲಯದ ರೂಪುರೇಷೆ ಹಾಗೂ ಅಂದಾಜುವೆಚ್ಚ 2014ರಲ್ಲಿ 24 ಕೋಟಿ ರೂ.ಗಳಿಗೇರಿತ್ತು. ಅದನ್ನು ಸರಕಾರದಿಂದ ಮಂಜೂರು ಮಾಡಿಸಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದ್ದು, ಇದೀಗ 35.69 ಕೋಟಿ ರೂ. ನಿರ್ಮಾಣವಾಗಿದೆ. ತಾರಾಲಯದ ನಿರ್ಮಾಣದ ಅಂದಾಜು ವೆಚ್ಚದಲ್ಲಿನ ಸುಮಾರು 11 ಕೋಟಿ ರೂ.ಗಳ ವ್ಯತ್ಯಾಸದ ಹಣವನ್ನು ಏಕಗಂಟಿನಲ್ಲಿ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡಿದ್ದರಿಂದ ಈ ಯೋಜನೆ ಸಾಕಾರಗೊಂಡಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ತಾರಾಲಯ ಹೊರಭಾಗದಲ್ಲಿ ಖಗೋಳ ವ್ಯೋಮಯಾನದ ಕುರಿತಂತೆ ಇಸ್ರೋದಿಂದ ಉಡಾಯಿಸಲಾಗಿರುವ ವಿವಿಧ ಉಪಗ್ರಹಣಗಳ ಮಾದರಿಗಳ ಪ್ರದರ್ಶನಕ್ಕೆ ಸಚಿವರು ಚಾಲನೆ ನೀಡಿದರು .ಈ ಸಂದರ್ಭ ಪಿಲಿಕುಳದಲ್ಲಿ ಪ್ರವಾಸಿಗರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವ ವಾಹನಗಳಿಗೂ ಸಚಿವರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಮಾತನಾಡಿ, 1993ರಲ್ಲಿ ಬೋಳುಗುಡ್ಡೆಯಾಗಿದ್ದ ಈ ಪ್ರದೇಶ ಅಂದಿನ ಜಿಲ್ಲಾಧಿಕಾರಿ ಡಾ.ಭರತ್ ಲಾಲಾ ಮೀನಾ ಅವರ ಮಾರ್ಗದರ್ಶನದಲ್ಲಿ ಇಂದು ತಾರಾಲಯದ ಆಕರ್ಷಣೆಯೊಂದಿಗೆ ಜಾಗತಿಕವಾಗಿ ಗುರುತಿಸಿಕೊಳ್ಳುವ ನಿಸರ್ಗಧಾಮವಾಗಿ ಬೆಳೆಯುವಲ್ಲಿ ಸಾಗಿ ಬಂದ ಹಾದಿಯನ್ನು ನೆನಪಿಸಿಕೊಂಡರು.

ಈ ಸಂದರ್ಭ ತಾರಾಲಯದ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಮೇಯರ್ ಕವಿತಾ ಸನಿಲ್, ಇಸ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗುರುಪ್ರಸಾದ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎಚ್. ಹೊನ್ನೇಗೌಡ, ಡಾ. ಕೆ.ವಿ.ರಾವ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಅಧಿಕಾರಿಗಳಾದ ಪ್ರಭಾಕರ ಶರ್ಮಾ, ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು.

3ಡಿ ತಾರಾಲಯದಲ್ಲಿ ಪ್ರದರ್ಶನಗೊಳ್ಳಲ್ಲಿರುವ ಭೋಮಂಡಲದ ವಿಸ್ಮಯಗಳ ಪರಿಚಯ :

ಇದು ನಭೋಮಂಡಲದ ವಿಸ್ಮಯಗಳನ್ನು ಪ್ರದರ್ಶಿಸುವ ಅಪರೂಪದ ತಾರಾಲಯವಾಗಿದ್ದು, ವಿಶಿಷ್ಟ ಸೌಲಭ್ಯಗಳನ್ನು ಹೊಂದಿದೆ. ಮಾತ್ರವಲ್ಲದೇ ಭಾರತದ ಮೊದಲ 3ಡಿ 8ಕೆ ಯುಎಚ್ ಡಿ ಹೈಬ್ರಿಡ್ ತಂತ್ರಜ್ಞಾನದ ತಾರಾಲಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.70 ಆಸನಗಳಿರುವ ತ್ರಿಡಿ ತಾರಾಲಯದಲ್ಲಿ ಬಾಹ್ಯಾಕಾಶದ ಕೌತುಕಳನ್ನು ಪ್ರದರ್ಶನಗಳ ಮೂಲಕ ವೀಕ್ಷಿಸಬಹುದಾಗಿದೆ.

3ಡಿ 8 ಕೆ ಹೈಬ್ರಿಡ್ ತಂತ್ರಜ್ಞಾನದಿಂದ ಕೂಡಿದ ಈ ತಾರಾಲಯವು 18 ಮೀಟರ್ನ ನ್ಯಾನೋ ಸಿಮ್ ಡೋಮನ್ನು 15 ಡಿಗ್ರಿ ಕೋನದಲ್ಲಿ ಅಳವಡಿಸಲಾಗಿದೆ. ಪ್ರೇಕ್ಷಕರು ಥಿಯೇಟರ್ನಲ್ಲಿ ಚಿತ್ರಗಳನ್ನು ವೀಕ್ಷಿಸುವಂತೆ ಪ್ರದರ್ಶನವನ್ನು ಆನಂದಿಸಬಹುದಾಗಿದೆ. ದೇಶದ ಪ್ರಥಮ ಆಯಕ್ಟಿವ್ ಅಪ್ಟೋಮೆಕ್ಯಾನಿಕಲ್ ಪ್ರೊಜೆಕ್ಷನ್ ಸಿಸ್ಟಮ್ ಒಳಗೊಂಡ ತಾರಾಲಯ ಇದಾಗಿದ್ದು, ಜಗತ್ತಿನ 21 ತ್ರಿಡಿ ತಾರಾಲಯಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಸ್ವಾಮಿ ವಿವೇಕಾನಂದ ತಾರಾಲಯವು 18 ಮೀಟರ್ ವ್ಯಾಸದಷ್ಟು ದೊಡ್ಡದಿದ್ದು, ಆಧುನಿಕ ತಂತ್ರಜ್ಞಾನದ ನ್ಯಾನೋಸೀಮ್ ಡೂಮ್ ಅನ್ನು 15 ಡಿಗ್ರಿ ಕೋನದಲ್ಲಿ ಇರಿಸಲಾಗಿದೆ. ಅಪ್ಟೋ- ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, 3ಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಈ ತಾರಾಲಯದಲ್ಲಿ ಸುಮಾರು 170 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

3ಡಿ ತಾರಾಲಯ ಹೊಂದಿದ ದೇಶದ ಮೊದಲ ನಗರ ದೇಶದಲ್ಲಿ ಈ ತರಹದ ಸೌಲಭ್ಯಗಳುಳ್ಳ 3ಡಿ ತಾರಾಲಯವನ್ನು ಹೊಂದಿದ ಪ್ರಥಮ ನಗರವಾಗಲಿದೆ ಮಂಗಳೂರು. ಪ್ರಪಂಚದಲ್ಲಿ 20 3ಡಿ ತಂತ್ರಜ್ಞಾನ ಹೊಂದಿರುವ ತಾರಾಲಯಗಳಿದ್ದು, ಯುರೋಪ್ ಖಂಡದಲ್ಲಿ ಮೊದಲನೆಯದಾಗಿ ಹೆವೆನ್ಸ್ ಆಫ್ ಕೊಪರ್ನಿಕಸ್ ರೀತಿಯ 3ಡಿ ತಂತ್ರಜ್ಞಾನ ಹೊಂದಿದ ತಾರಾಲಯವಾಗಿದೆ

ಈ ತಾರಾಲಯವು ನಾಳೆ ಉದ್ಘಾಟನೆಗೊಂಡರು ಸಾರ್ವಜನಿಕರ ವೀಕ್ಷಣೆಗೆ ಮಾರ್ಚ್ 2ರಿಂದ ಲಭ್ಯವಾಗಲಿದೆ. ಆರಂಭದಲ್ಲಿ ತಲಾ 25 ನಿಮಿಷಗಳ ನಾಲ್ಕರಿಂದ ಆರು ಪ್ರದರ್ಶನಗಳನ್ನು ಪ್ರತಿ ದಿನ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ನಾಲ್ಕು ತಾರಾ ಲೋಕಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರದರ್ಶನ ನಡೆಯಲಿದೆ.

ನಾಲ್ಕೈದು ತಿಂಗಳ ಅವಧಿಯಲ್ಲಿ ಪ್ರದರ್ಶನಗಳ ವಿಷಯಗಳಲ್ಲಿ ಬದಲಾವಣೆಯೊಂದಿಗೆ ಹೊಸ ವಿಷಯಗಳ ಪ್ರದರ್ಶನಗಳು ಸೇರ್ಪಡೆಗೊಳ್ಳಲಿವೆ. ಪಿಲಿಕುಳದಲ್ಲಿರುವ ಈ ತಾರಾಲಯಕ್ಕೆ ಆನ್ ಲೈನ್ ನಲ್ಲೂ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಬುಕ್ ಮೈ ಶೋ ಮೂಲಕ ಆನ್‌ಲೈನ್‌ನಲ್ಲಿ ಇದರ ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ಮಕ್ಕಳಿಗೆ ಒಂದು ಪ್ರದರ್ಶನಕ್ಕೆ 25 ರುಪಾಯಿ ಮಕ್ಕಳಿಗೆ ಒಂದು ಪ್ರದರ್ಶನ ವೀಕ್ಷಿಸಲು 25 ರುಪಾಯಿ ಹಾಗೂ ಸಾರ್ವಜನಿಕರಿಗೆ ಒಂದು ಪ್ರದರ್ಶನ ವೀಕ್ಷಿಸಲು 60 ರುಪಾಯಿ ನಿಗದಿಪಡಿಸಲಾಗಿದೆ. ಅಲ್ಲದೆ, ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಸಂದರ್ಶಕರಿಗೆ ವಿಶೇಷ ಪ್ಯಾಕೇಜ್‌ ಅನ್ನು ಮಾರ್ಚ್ 1 ರಿಂದ ಒದಗಿಸಲಾಗುವುದು. 100 ರುಪಾಯಿ ಟಿಕೆಟ್ ಪಡೆದುಕೊಂಡರೆ ಪಿಲಿಕುಳದ ಎಲ್ಲ ವಿಭಾಗಗಳಿಗೆ ಪ್ರವೇಶ ಪಡೆಯಬಹುದು. ಪಿಲಿಕುಳ ಪ್ರವೇಶದ್ವಾರದ ಬಲ ಬದಿಯಲ್ಲಿರುವ ಕೌಂಟರ್‌ನಲ್ಲಿ ಈ ಟಿಕೆಟ್ ಗಳನ್ನು ವಿತರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಇಂದು ಮತ್ತು ನಾಳೆ ಉಚಿತ ಪ್ರದರ್ಶನ:

ತಾರಾಲಯದ ಉದ್ಘಾಟನಾ ಸಮಾರಂಭದ ಅಂಗವಾಗಿ ಇಂದು ಮತ್ತು ನಾಳೆ ತಾರಾಲಯದಲ್ಲಿ ಮುಂಗಡ ಟಿಕೆಟ್ ಮೂಲಕ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿದೆ.

Comments are closed.