ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ
ಮಂಗಳೂರು : ಬಿಜೆಪಿಯಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಾಹಿಸಿದ ಬಿಜೆಪಿ ಹಿರಿಯ (ಮಾಜಿ) ಮುಖಂಡ, ಆರ್.ಎಸ್.ಎಸ್ ನಾಯಕ, ಸಾಮಾಜಿಕ ಸೇವಾಕರ್ತ ಶ್ರೀಕರ ಪ್ರಭು ಅವರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.
2014ರಲ್ಲಿ ಬಿಜೆಪಿಯಿಂದ ಉಚ್ಚಾಟಿತರಾಗಿ ಇದೀಗ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧಾಕಾಂಕ್ಷಿ ಯಾಗಿರುವ ಶ್ರೀಕರ ಪ್ರಭು ಅವರು ನಗರದ ಸಿ.ವಿ. ನಾಯಕ್ ಸಭಾಂಗಣದಲ್ಲಿ ರವಿವಾರ ನೂರಾರು ಬೆಂಬಲಿಗರೊಂದಿಗೆ ತಮ್ಮ ಚುನಾವಣಾ ಪೂರ್ವ ಜನಸಂಪರ್ಕ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ಭಾರದ ಮನಸ್ಸಿನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಗೆಲುವು ಶತಸಿದ್ಧ. ಆದರೆ ಇಷ್ಟು ಸಮಯ ಯಾವ ಸಿದ್ಧಾಂತದಡಿ ಬೆಳೆದೆನೋ ಆ ಸಿದ್ಧಾಂತವನ್ನು ಕೈಬಿಡಲಾರೆ ಎಂದು ಸ್ಪಷ್ಟಪಡಿಸಿದ ಅವರು, ನನ್ನನ್ನು ಬಿಜೆಪಿಯಿಂದ ಹೊರತುಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಭಾರದ ಮನಸ್ಸಿನಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಮುಂದೆ ಶಾಸಕನಾದರೂ ಬಿಜೆಪಿ ತತ್ವಕ್ಕೆ ಬದ್ಧನಾಗಿಯೇ ಇರುತ್ತೇನೆ’ ಎಂದು ನುಡಿದರು.
2014ರಲ್ಲಿ ಪ್ರಹ್ಲಾದ ಜೋಶಿ ಸಕಾರಣ ನೀಡದೆ, ಶೋಕಾಸ್ ನೋಟಿಸ್ ಕೂಡ ನೀಡದೆ ಏಕಾಏಕಿ ಬಿಜೆಪಿಯಿಂದ ಉಚ್ಛಾಟನೆ ಮಾಡಿದರು. ಆದರೆ ನಾನೇನು ತಪ್ಪು ಮಾಡಿದೆ ಎಂದು ಹೇಳಲೇ ಇಲ್ಲ. ಪಕ್ಷದ ಸಂವಿಧಾನವನ್ನು ಕೈಬಿಟ್ಟು ನಿರ್ಣಯ ತೆಗೆದುಕೊಂಡಿದ್ದಾರೆ.
ಕಾರ್ಯಕರ್ತನಿಗೆ ಕ್ಷಮೆ ಕೇಳುವ ಅವಕಾಶ ಇಲ್ಲ ಎಂದರೆ ಇದೆಂಥ ವ್ಯವಸ್ಥೆ? ಕೇವಲ ನಾಲ್ಕು ಮಂದಿಯ ಅಧಿಕಾರ ದಾಹದಿಂದ ನನ್ನಂತಹ ನಿಷ್ಠಾವಂತ ಕಾರ್ಯಕರ್ತರಿಗೆ ತೊಂದರೆಯಾಗಿದೆ. ನಾಳೆ ಬೇರೆ ಕಾರ್ಯಕರ್ತರಿಗೂ ಇದೇ ಪರಿಸ್ಥಿತಿ ಬಂದೀತು. ಅಂಥವರಿಗೆ ಮತದಾರರು ಪಾಠ ಕಲಿಸಬೇಕು ಎಂದು ಹೇಳಿದರು.
ಇಲ್ಲಿ ಎಂಎಲ್‌ಸಿ, ಎಂಪಿ ಆದವರ ಮೊದಲ ಚುನಾವಣೆಯಲ್ಲಿ ಅವರ ಹಿಂದೆ ಇದ್ದವನೇ ನಾನು. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಸದಸ್ಯತ್ವವನ್ನು ಬಿಜೆಪಿಯಲ್ಲಿದ್ದಾಗ ಮಾಡಿಕೊಟ್ಟಿದ್ದೆ. ಅವರು ಅಧಿಕಾರಕ್ಕೆ ಬಂದ ನಂತರ ಅವರು ನೀಡುತ್ತಿದ್ದ ಹೇಳಿಕೆಗಳನ್ನೂ ನಾನೇ ಹೇಳಿಕೊಡುತ್ತಿದ್ದೆ. ಅವರಿಗಾಗಿ ರಾತ್ರಿ- ಹಗಲು ಕೆಲಸ ಮಾಡಿದ್ದೇನೆ. ಆದರೆ ಅಂಥವರಿಗೆ ಅಧಿಕಾರ ಬಂದ ಮೇಲೆ ಕಾರ್ಯಕರ್ತರ ನೆನಪೇ ಇಲ್ಲ. ನಾನೂ ಎಂಎಲ್‌ಎ ಆಗಬೇಕೆಂಬ ಕಾರ್ಯಕರ್ತರ ಬೇಡಿಕೆ ಆಗಲೇ ಇತ್ತು. ಸಂಸದ, ಶಾಸಕನಾದರೆ ಅದೇನು ದೊಡ್ಡ ಸಾಧನೆಯೇ ಎಂದು ಬಿಜೆಪಿ ಮುಖಂಡರ ಹೆಸರೆತ್ತದೆ ಶ್ರೀಕರ ಪ್ರಭು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ವಾಜಪೇಯಿ ಆದರ್ಶ :
ನನಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ವಾಜಪೇಯಿ ಆದರ್ಶ. ನರೇಂದ್ರ ಮೋದಿ ಅವರ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡೇ ಮಾಡುತ್ತೇನೆ. ಆದರೆ ಬೆರಳೆಣಿಕೆಯ ನಾಯಕರಿಂದಾಗಿ ಕಾರ್ಯಕರ್ತರಿಗೆ ತೊಂದರೆಯಾಗಿದ್ದಕ್ಕೆ ಈಗ ಭಾರದ ಮನಸ್ಸಿನಿಂದ ಸ್ಪರ್ಧಿಸುತ್ತಿದ್ದೇನೆ. ಅವರು (ಬಿಜೆಪಿ) ಕಾರಣವೇ ಇಲ್ಲದೆ ರಾಜಕೀಯವಾಗಿ ನನ್ನನ್ನು ಕೊಲೆ ಮಾಡಿದ್ದಾರೆ. ಆದರೆ ಸಾಮಾಜಿಕ ಜೀವನದಿಂದ ನನ್ನನ್ನು ವಿಮುಖ ಮಾಡಲಾಗದು ಎಂದ ಶ್ರೀಕರ ಪ್ರಭು ಹೇಳಿದರು.
Comments are closed.