ಮುಂಬಯಿ, ಮಾ.26: ಕರ್ನಾಟಕ ಸರಕಾರವು ನವಿಮುಂಬಯಿನ ವಾಶಿಯಲ್ಲಿ ನಿರ್ಮಿಸಿದ ಕರ್ನಾಟಕ ಭವನ ಮುಂಬಯಿ ಮತ್ತು ಉಪನಗರಗಳ ಸಮಸ್ತ ಕನ್ನಡಿಗರ ಸೇವೆಗೂ ಅನುಕೂಲಕರವಾಗಿ, ಕಾರ್ಯಕ್ರಮಗಳ ಸದ್ಭಳಕೆಗೆ ವರವಾಗಬೇಕು ಎಂದು ಹಿರಿಯ ನ್ಯಾಯವಾದಿ, ಸಂಘಟಕ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಆಶಯ ವ್ಯಕ್ತಪಡಿಸಿದರು.
ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಸಭೆಯೊಂದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಬಿ.ಎಲ್ ರಾವ್ ಕರ್ನಾಟಕದ ಜನತೆ, ಹೆಸರಲ್ಲಿ ನಿರ್ಮಿಸಲಾದ ಈ ಭವನ ಈಗ ಯಾರಿಗೆ ವರದಾನ ಎನ್ನುವುದು ಸದ್ಯ ಪ್ರೆಶ್ನೆಯಾಗಿದೆ. ಇದು ಬರೇ ಶಾಸನದ ತಾಣವೋ ಅಥವಾ ಕರ್ನಾಟಕ ಸರಕಾರದ ಸೊಗಸಿನ ಮಹಡಿಯೋ.? ಎಂದು ಸಂದೇಹ ಪಡುವಂತಾಗಿದೆ. ಇದು ಮುಂಬಯಿಯಾದ್ಯಂತ ನೆಲೆಯಾಗಿರುವ ಪ್ರತೀಯೋರ್ವ ಕರ್ನಾಟಕದ ಜನತೆಯ ಆಶಯ-ಆಶ್ರಯದ ಭವನ ಆಗಬೇಕಾಗಿದೆ ಎಂದು ಅಪೇಕ್ಷಿಸುತ್ತಿದ್ದೇವೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಪಂಡಿತ್ ನವೀನ್‌ಚಂದ್ರ ಆರ್.ಸನಿಲ್, ಲೇಖಕ ಪ್ರಭಾಕರ್ ಬೆಳುವಾಯಿ, ಎಸ್.ಕೆ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 40 ಕೋಟಿ ಮೊತ್ತಕ್ಕಿಂತಲೂ ಅಧಿಕ ಮೌಲ್ಯದ ಈ ಭವನ ಕರ್ನಾಟಕ ಸರಕಾರದ ಆಡಳಿತ್ವದ ಮೈಸೂರು ಸೇಲ್ಸ್ ಇಂಟರ್ ನೇಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಸಂಸ್ಥೆಯ ಅಧೀನದಲ್ಲಿ ಸಿದ್ಧಗೊಂಡಿರುವುದು ನಿಜ. ಆದರೆ ಕರ್ನಾಟಕದ ಹೆಸರಿನಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರದ ಸಹಯೋಗ ಪಡೆದು ಭವನ ನಿರ್ಮಿಸಿದೆ. ಆದುದರಿಂದ ಮಹಾನಗರದಲ್ಲಿನ ಕಾರ್ಯನಿರತ ಕನ್ನಡಿಗರ, ಕರ್ನಾಟಕದ ಜನತೆಯ ಸಂಸ್ಥೆಗಳಿಗೂ ಈ ಕರ್ನಾಟಕ ಭವನದ ಅವಕಾಶ ಸಿಗಬೇಕು. ಆದುದರಿಂದ ನಮ್ಮ ಅಂದೋಲನಕ್ಕೆ ಕರ್ನಾಟಕದ ಜನತೆ, ಸಂಘಸಂಸ್ಥೆಗಳ ಎಲ್ಲರ ಸಹಕಾರ ಲಭ್ಯವಾಗಬೇಕು ಎಂದು ಈ ಭವನದ ಅವಕಾಶದ ಹಿಂದೆ ಹಗಲಿರುಳು ಶ್ರಮಿಸಿದ ಹೆಚ್.ಬಿ.ಎಲ್ ರಾವ್ ಪ್ರಸ್ತಾವನೆ ಮೂಲಕ ಸ್ಥೂಲವಾದ ಮಾಹಿತುಯನ್ನಿತ್ತರು.
ಈ ಭವನದ ಫಲಾನುಭವಿಗಳು ಯಾರು ಎನ್ನುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿದೆ. ಮುಂಬಯಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಪ್ರತೀಯೋರ್ವ ಕನ್ನಡಿಗ, ಕನ್ನಡ-ಕರ್ನಾಟಕ ಸಂಸ್ಥೆಗಳು, ಕರ್ನಾಟಕದಿಂದ ಬಂದು ಮುಂಬಯಿಯಲ್ಲಿ ನೆಲೆಯಾಗಿರುವ ಎಲ್ಲಾ ಜಾತೀಯ, ಭಾಷಿಗರೂ ಸೇರಿದಂತೆ ಇನ್ನಿತರ ಸಮಗ್ರ ಕರ್ನಾಟಕದ ಜನತೆಯ ಮುಖ್ಯಸ್ಥರು, ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಈ ಬಗ್ಗೆ ಚಿಂತಿಸಿ ವಿಷಯವನ್ನು ನಿರ್ಲಕ್ಷಿಸದೆ ನಮ್ಮ ಪ್ರಯತ್ನಕ್ಕೆ ಬೆಂಬಲಿಸುವ ಅಗತ್ಯವಿದೆ ಎಂದು ಪಾಲೆತ್ತಾಡಿ ಕರೆಯಿತ್ತರು.
ಮಹಾನಗರಿಯಲ್ಲಿನ ಕನ್ನಡಿಗರೆಲ್ಲರೂ ಜಾತಿ ಮತ ಧರ್ಮ ಪಂಕ್ತಿ ಮರೆತು ನ್ಯಾಯಬದ್ಧರಾಗಿ ಒಗ್ಗೂಡಿ ಭವನದ ಔಚಿತ್ಯಕ್ಕಾಗಿ ಒಮ್ಮತದಿಂದ ಶ್ರಮಿಸುವುದು ಅಗತ್ಯವಿದೆ ಎಂದು ಮೂರ್‍ನಾಲ್ಕು ವರ್ಷಗಳಿಂದ ನಾನೂ ಮಾಧ್ಯಮಗಳ ಮೂಲಕ ತಿಳಿಸುತ್ತಾ ಬಂದಿದ್ದೇನೆ. ಕರ್ನಾಟಕ ಭವನದಲ್ಲಿ ತಮ್ಮ ಸಂಸ್ಥೆಗಳ ಪ್ರತಿನಿಧಿತ್ವ ಕಾಯ್ದು ಕೊಳ್ಳಲು ನಗರದಲ್ಲಿನ ಪ್ರತೀಯೋರ್ವ ಕನ್ನಡಿಗನಿಗೆ ಹಕ್ಕಿದೆ.
ಈಗಲೇ ಭವನವನ್ನು ಪ್ರತಿನಿಧಿಸುವ ಪ್ರಯತ್ನ ಆಗದಿದ್ದರೆ ಭವಿಷ್ಯತ್ತಿನಲ್ಲಿ ಕರ್ನಾಟಕದ ಸಾಮಾನ್ಯ ಜನತೆಗೆ ಬಿಡಿ, ಕನ್ನಡ ಸಾಹಿತಿ, ಲೇಖಕರು, ಪತ್ರಕರ್ತರು, ಕನ್ನಡಿಗರು, ಇಲ್ಲಿನ ಕರ್ನಾಟಕದ ಸಂಘ-ಸಂಸ್ಥಗಳು, ಸಂಸ್ಥೆಗಳ ಪದಾಧಿಕಾರಿಗಳೂ ಭವನವನ್ನು ಬರೇ ಹೊರಗಿನಿಂದಲೇ ನೋಡಿ ಖುಷಿ ಪಡೆಯುವಂತಾಗ ಬಹುದು. ಈಗ ಅದೇ ಆಗುತ್ತಿದೆ. ಇನ್ನಾದರೂ ನಾವೆಲ್ಲರೂ ಜೊತೆಗೂಡಿ ಈ ಕರ್ನಾಟಕ ಭವನದಲ್ಲಿ ನಮಗೂ ಅವಕಾಶ ನೀಡುವಲ್ಲಿ ಪ್ರಯತ್ನಿಸೋಣ ಎಂದು ಪತ್ರಕರ್ತ ರೋನ್ಸ್ ಬಂಟ್ವಾಳ್ ತಿಳಿಸಿದರು.
ಕರ್ನಾಟಕ ಭವನದಲ್ಲಿ ತಮ್ಮ ಪಾತ್ರ ಏನು ಎನ್ನುವ ವಿಷಯ ಮನವರಿಸಿಕೊಂಡು ಸಿದ್ಧರಾಗುವುದು ಉಚಿತವೆಣಿಸಿದೆ. ಈ ಬಗ್ಗೆ ಸಭೆ ಸೇರಿ ಸಮಾಲೋಚನಾ ಸಭೆ ಕೈಗೊಂಡು ಮೊದಲಾಗಿ ಎಂಎಸ್‌ಐಎಲ್ ಸಂಸ್ಥೆಯ ಆಡಳಿತ ನಿರ್ದೇಶಕರನ್ನು ಭೇಟಿ ಮಾಡಿ ಮುಂದಿನ ಕ್ರಮಕ್ಕೆ ಸಜ್ಜಾಗೋಣ ಎಂದು ಡಾ| ಮೂಡಿಗೆರೆ ತಿಳಿಸಿದರು.
ಭವನಕ್ಕೆ ಸಂಬಂಧಿತ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ನಮ್ಮ ಮತ್ತು ಎಂಎಸ್‌ಐಎಲ್‌ನ ಅಭಿಪ್ರಾಯಗಳನ್ನು ಪಡೆದು ಸಾರ್ವಜನಿಕವಾಗಿ ಚರ್ಚಿಸೋಣ. ಆದರೆ ಈ ಭವನ ಕನ್ನಡಿಗರಿಗೆಲ್ಲರ ಕಾರ್ಯಕ್ರಮಗಳಿಗೆ ಸಲ್ಲುವಂತಾಗಬೇಕು ಎಲ್ಲರಿಗೂ ಲಭಿಸುವಂತಾಗಬೇಕು ಎನ್ನುತ್ತಾ ಸಭೆಗೆ ನೆರೆದವರಿಗೆ ವಂದಿಸಿದರು.
ಚಿತ್ರ / ವರದಿ : ರೋನ್ಸ್ ಬಂಟ್ವಾಳ್
Comments are closed.