ಉಡುಪಿ: ಕೈಹಿಡಿದ ಅಮಾಯಕ ಪತ್ನಿಯನ್ನು ವಂಚಿಸಿ ಎರಡನೇ ವಿವಾಹವಾದ ಕುಂದಾಪುರ ತಾಲೂಕಿನ ನಾಡಾ ಗ್ರಾಮದ ಜಗದೀಶ ಯಾನೆ ಜಗನ್ನಾಥ ಎನ್ನುವಾತ ವಿದೇಶಕ್ಕೆ ಪರಾರಿಯಾಗದಂತೇ ತಡೆಯಲು ಸೂಕ್ತಕ್ರಮ ಕೈಗೊಳ್ಳುವಂತೇ ಕುಂದಾಪುರ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾದೀಶರು ಪಾಸ್‌ಪೋರ್‍ಟ್ ಕಛೇರಿಯವರಿಗೆ ಆದೇಶ ಹೋರಡಿಸಿದ್ದಾರೆ. ಇದೀಗ ತನಗೆ ಹಾಗೂ ತನ್ನ ಮನೆಯವರಿಗೆ ತನ್ನ ಗಂಡ ಜಗದೀಶನಿಂದ ಸಂಪೂರ್ಣ ರಕ್ಷಣೆ ನೀಡಬೇಕೆಂದು ಅಮಿತಾ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ವಿನಂತಿಸಿದ್ದಾರೆಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ|ರವೀಂದ್ರನಾಥ್ ಶ್ಯಾನುಭಾಗ್ ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಒಂಟಿಬಾಳು ಸಾಗಿಸಿದ ಅಮಿತಾ
ಸುಮಾರು ಆರು ವರ್ಷದ ಹಿಂದೆ ಐರೋಡಿ ಗ್ರಾಮದ ಅಮಿತಾ ಎಂಬ 22 ವರ್ಷದ ಅಮಾಯಕ ಯುವತಿಯನ್ನು ಮದುವೆಯಾದ ಜಗದೀಶನು ನಾಡಾಗ್ರಾಮದ ತೆಂಕ ಬೈಲಿನಲ್ಲಿರುವ ತನ್ನ ಹಿರಿಯರ ಮನೆಯಲ್ಲಿ ಸಂಸಾರ ಹೂಡಿದ. ಮದುವೆಯಾದ ದಿನದಿಂದಲೂ ಗಂಡ ತನ್ನಲ್ಲಿ ಯಾವುದೇ ಪ್ರೀತಿ ವಾತ್ಸಲ್ಯ ತೋರಿಸದಿದ್ದರೂ ಅಮಿತಾ ತನ್ನ ಸಂಸಾರಿಕ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸುತಿದ್ದಳು. ತನ್ನ ಗಂಡ ದಿನಾಲು ಸಿಡುಕು ಮತ್ತು ಕೋಪವನ್ನು ಪ್ರದರ್ಶಿಸುತ್ತಿರುವುದೇಕೆ ಎಂಬುದನ್ನು ತಿಳಿಯದ ಅಮಿತ ಎಲ್ಲಾ ಅವಮಾನಗಳನ್ನು ಸಹಿಸುತ್ತಿದ್ದಳು. ಕ್ಷುಲ್ಲಕ ಕಾರಣಗಳಿಗೆ ತನ್ನ ಮೇಲೆ ರೇಗುತ್ತಿದ್ದ ಗಂಡನನ್ನು ಸಹಿಸಿ ಒಂಟಿ ಬಾಳು ಸಾಗಿಸುತಿದ್ದಳು.
ಹಠಸಾಧನೆಗಾಗಿ ವಿವಾಹ
ಸುಮಾರು ಎರಡು ವರ್ಷಗಳ ಕಾಲ ಗಂಡನ ಕಿರುಕುಳಗಳನ್ನು ಸಹಿಸಿದ ಮೇಲೆ ಆತ ನೀಡುತಿದ್ದ ಹಿಂಸೆಯ ನಿಜವಾದ ಕಾರಣ ತಿಳಿಯಿತು. ಆತ ಈ ವಿವಾಹಕ್ಕೂ ಮೊದಲೇ ಇನ್ನೊಂದು ಹುಡುಗಿಯೊಂದಿಗೆ ವಾಸವಾಗಿದ್ದು ದೈಹಿಕ ಸಂಬಂಧವನ್ನೂ ಇಟ್ಟು ಕೊಂಡಿದ್ದನಂತೆ. ಈ ವಿಚಾರ ಆತನ ತಾಯಿ ತಂದೆಗೆ ತಿಳಿದುಬಂದರೂ ತಮಗೆ ತಮ್ಮ ಸಮುದಾಯದ ಸೊಸೆಯೇ ಬೇಕು ಎಂದು ಹಠಹಿಡಿದರು. ತನ್ನ ಮಗ ಈಗಾಗಲೇ ಇನ್ನೊರ್ವ ಹುಡುಗಿಯೊಂದಿಗೆ ದೈಹಿಕ ಸಂಬಂಧವನ್ನಿಟ್ಟುಕೊಂಡಿದ್ದಾನೆ ಎಂಬ ವಿಚಾರವನ್ನು ಮುಚ್ಚಿಟ್ಟು ಐರೋಡಿಯ ಈಕೆ ಮನೆಗೆ ತೆರಳಿ ಅವರ ಮಗಳಾದ ಅಮಿತಾಳ ನೆಂಟಸ್ತಿಕೆಯನ್ನು ಕುದುರಿಸಿಯೇ ಬಿಟ್ಟರು. ತಮ್ಮ ಹಠಕ್ಕಾಗಿ ಅಮಾಯಕ ಯುವತಿಯ ಜೀವನ ಹಾಳುಮಾಡಿದ್ದಾರೆ ಎಂದು ಶ್ಯಾನುಭಾಗ್ ಮಾಹಿತಿ ನೀಡಿದರು.
ವಿವಾಹ ವಿಚ್ಚೇದನಕ್ಕೆ ಅರ್ಜಿ
2014ರಲ್ಲಿ ಈ ಕುರಿತು ಎಲ್ಲಾ ವಿಚಾರಗಳು ಎಲ್ಲರಿಗೂ ತಿಳಿದ ಮೇಲೆ ಎರಡೂ ಕುಟುಂಬದ ಹಿರಿಯರ ಸಭೆನಡೆದು ಗಂಡ ಜಗನ್ನಾಥ ಅಮಿತಾಳಿಗೆ ೨೫ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು, ಹಾಗೂ ಆಕೆಯೊಂದಿಗಿನ ವಿವಾಹವನ್ನು ಕೋರ್ಟ್ ಡಿಕ್ರಿಯ ಮೂಲಕ ರದ್ದುಗೊಳಿಸಬೇಕು ಎಂದು ನಿರ್ಧಾರವಾಯಿತು. ವಿಚ್ಚೇದನ ಆದೇಶ ಸಿಕ್ಕಿದೊಡನೆ ಉಳಿದ ಹಣವನ್ನು ಪಾವತಿಸುವ ಅಶ್ವಾಸನೆಯೊಂದಿಗೆ ಜಗನ್ನಾಥ ಪರಿಹಾರದ ಮೊದಲ ಕಂತು ೧೦ಲಕ್ಷ ರೂಪಾಯಿಗಳನ್ನು ಪಾವತಿಸಿದ. ಪರಸ್ಪರ ಒಪ್ಪಿಗೆಯ ಮೂಲಕ ವಿವಾಹ ವಿಚ್ಚೇದನಕ್ಕಾಗಿ ಸಿವಿಲ್ ಕೋರ್ಟಿಗೆ ಸಲ್ಲಿಸಬೇಕಾದ ಅರ್ಜಿಗೆ ಸಹಿಯನ್ನೂ ಹಾಕಿದ.
ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಾ ಅರ್ಜಿ ದಾಖಲಿಸಿದರೂ ಒಪ್ಪಂದದಂತೇ ಇನ್ನೂ ನೀಡಬೇಕಾದ ೧೫ ಲಕ್ಷ ರೂಪಾಯಿಗಳನ್ನು ಪಾವತಿಸದಿರಲು ನಿರ್ಧರಿಸಿದ. ನ್ಯಾಯಾಲಯದ ವಿಚಾರಣೆಗಳಲ್ಲಿ ಹಾಜರಾಗುವುದನ್ನೇ ನಿಲ್ಲಿಸಿದ. ವಿಚ್ಛೇದನಕ್ಕಾಗಿ ಅನಗತ್ಯ ವಿಳಂಬ ಮಾಡಿದ್ದಲ್ಲಿ ಪರಿಹಾರ ಧನ ಉಳಿಸ ಬಹುದೆಂಬುದು ಆತನ ಹುನ್ನಾರ ಮಾಡುತ್ತಿದ್ದಾನೆಂದು ಆರೋಪಿಸಲಾಗಿದೆ.
ಮಾನವಹಕ್ಕು ಪ್ರತಿಷ್ಠಾನಕ್ಕೆ ದೂರು…
ಅಮಿತಾ ಹಾಗೂ ಆಕೆಯ ಹೆತ್ತವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿ ನ್ಯಾಯಪಡೆಯಲು ಸಹಕಾರ ಯಾಚಿಸಿದರು. ಇಡೀ ಪ್ರಕರಣವನ್ನು ವಿಶ್ಲೇಷಿಸಿ ಅಮಿತಾಳಿಗೆ ಕಾನೂನಿನ ನೆರವು ನೀಡಲಾಯಿತು. ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಯಿತು. ಜಗನ್ನಾಥ ತನಗೆ ವಿಚ್ಛೇದನ ನೀಡದೇ ಎರಡನೇ ಹೆಂಡತಿಯೊಂದಿಗೆ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ನಾಡಾಗ್ರಾಮಕ್ಕೆ ಭೇಟಿ ನೀಡಿದ ಅಮಿತಾ ಅವರಿಗೆ ಇನ್ನೊಂದು ಶಾಕ್ ಕಾದಿತ್ತು. ಆಕೆ ಸ್ವತಃ ಜಗನ್ನಾಥ್ ಪ್ರಿಯಕರೆಯನ್ನು ಭೇಟಿ ಮಾಡಿದ್ದು ಆಕೆ ಈಗಾಗಲೇ ನನ್ನನ್ನು ಜಗನ್ನಾಥ್ ವಿವಾಹವಾಗಿ ಎರಡು ಹೆಣ್ಣು ಮಕ್ಕಳೂ ಇದ್ದಾರೆ” ಎಂದು ತಿಳಿಸಿದ್ದಾಳೆ ಎಂದು ಅಮಿತಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾಳೆ.
ಇದೀಗ ಜಿಲ್ಲಾಧಿಕಾರಿ ಪ್ರಿಯಾಂಕಾ ಪ್ರಾನ್ಸಿಸ್ ಮೇರಿಯವರು ನಿರ್ದೇಶನದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿಯವರು ಕುಂದಾಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು. ನ್ಯಾಯಾಧೀಶರು ಜಗನ್ನಾಥನ ವಿದೇಶ ಪ್ರಯಾಣಕ್ಕೆ ತಡೆನೀಡಿದ್ದಾರೆ. ಈ ದೂರು ಇತ್ಯಾರ್ಥವಾಗುವ ತನಕ ಅಮಿತಾಳಿಗೆ ಪ್ರತಿ ತಿಂಗಳು ೨೦೦೦ ರೂಪಾಯಿ ಪರಿಹಾರ ಧನ ನೀಡುವಂತೆ ಮಧ್ಯಂತರ ಆದೇಶವನ್ನೂ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಂಚನೆಗೊಳಗಾದ ಅಮಿತ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.
Comments are closed.