ಕರಾವಳಿ

ಈಶ್ವರ್ ಕಟೀಲು ಕೊಲೆ ಯತ್ನ ಪ್ರಕರಣ : ಉಳಿದ ಆರೋಪಿಗಳ ಬಂಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹ

Pinterest LinkedIn Tumblr

ಮಂಗಳೂರು : ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಬಿಜೆಪಿ ನಾಯಕ ಈಶ್ವರ್ ಕಟೀಲು ಕೊಲೆಗೆ ಯತ್ನಿಸಿದ ಆರೋಪಿಗಳಲ್ಲಿ ಮೂವರನ್ನು ಮಾತ್ರ ಬಂಧಿಸಲಾಗಿದ್ದು, ರಾಜಕೀಯ ಒತ್ತಡದಿಂದ ಉಳಿದ ಮೂವರು ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.

ಈ ಹಿಂದೆ ಸುಖಾನಂದ ಶೆಟ್ಟಿಯವರ ಮೇಲೆ ಹಲ್ಲೆ ಯತ್ನ ನಡೆದ ಸಂದರ್ಭದಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ಸುಖಾನಂದ ಶೆಟ್ಟಿಯವರನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಇದೀಗ ಕಾಂಗ್ರೆಸ್ ನಾಯಕರುಗಳ ಬೆಂಬಲದಿಂದ ಈಶ್ವರ್ ಕಟೀಲು ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ ಈ ಬಗ್ಗೆ ಪೊಲೀಸರಿಗೆ ಮೊದಲೇ ಸೂಚನೆ ಸಿಕ್ಕಿದ್ದರಿಂದ ಈಶ್ವರ್ ಪಾರಾಗಿದ್ದಾರೆ. ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ಉಳಿದ ಮೂವರನ್ನು ಬಂಧಿಸಲು ರಾಜಕೀಯ ಒತ್ತಡದಿಂದಾಗಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ಸತ್ಯಾಂಶವನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈಶ್ವರ್ ಕಟೀಲು ಕೊಲೆ ಯತ್ನ ಪ್ರಕರಣದಲ್ಲಿ ಉಳಿದ ಮೂರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಹಲ್ಲೆ ಪ್ರಕರಣಕ್ಕೆ ಹಣಕಾಸು ಸಹಾಯ ಮಾಡಿದವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಬಂಧನವಾಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಟೀಲು ಎಚ್ಚರಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಜಿಲ್ಲೆಯಲ್ಲಿ ಶಾಂತಿ ವ್ಯವಸ್ಥೆ ಹದಗೆಟ್ಟಿದ್ದು, ಡ್ರಗ್ ಮಾಫಿಯಾ ನಡೆಯುತ್ತಿದೆ. ನವೀನ್ ಕಟೀಲು ನಂತಹ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ಬೆಂಬಲದಿಂದ ಗೂಂಡಾಗಿರಿ ನಡೆಸುತ್ತಿದ್ದಾರೆ. ಗಣಿಗಾರಿಕೆಯವರಿಂದ ಹಫ್ತಾ ವಸೂಲು ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

Comments are closed.