ಮಂಗಳೂರು, ಎಪ್ರಿಲ್,1: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾದ ಎಂಟು ದಿನಗಳ ‘ತುಳು ನಾಟಕ ಪರ್ಬ’ದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಲಚ್ಚು ನಾಟಕದ ಮೂಲ ಕರ್ತೃ ಎನ್.ಗೋಪಾಲಕೃಷ್ಣ ಬೆಂಗಳೂರು ಅವರು, ತುಳು ನಾಟಕಗಳ ಅಧ್ಯಯನ ಮತ್ತು ವಿಮರ್ಶೆ ನಡೆಯಬೇಕು. ತುಳು ನಾಟಕಗಳು ಜನರಿಗೆ ಮನೋರಂಜನೆ ನೀಡುವ ಸಾಹಿತ್ಯವಾಗಿದೆ. ತುಳು ನಾಟಕಗಳ ವಿಮರ್ಶೆ ಹೆಚ್ಚಾಗಬೇಕು. ನಾಟಕ ಪ್ರದರ್ಶನದಿಂದ ಸಮಾಜ ಕ್ಕಾದ ಪರಿಣಾಮಗಳ ಬಗ್ಗೆ ಅವಲೋಕನ ನಡೆಯಬೇಕು ಎಂದರು.
ಉಪನ್ಯಾಸಕ ಡಾ.ಶಿವರಾಮ ಶೆಟ್ಟಿ ಬೋಳಾರ ಮಾತನಾಡಿ, ನಾಟಕಗಳು ಮನಸ್ಸಿಗೆ ಖುಷಿ ಕೊಡುವುದರ ಜೊತೆಗೆ ನಾಡಿನ ಸಂಸ್ಕೃತಿ, ಪರಂಪರೆಯನ್ನು ಪ್ರತಿನಿಧಿಸುತ್ತವೆ. ತುಳು ನಾಟಕಗಳು ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಉತ್ತಮ ಸಂದೇಶವನ್ನು ನೀಡುತ್ತದೆ. ಸರಳ ಬಾಯಿ ಮಾತಿನ ನಾಟಕದ ಹೆಸರುಗಳು ಜನರನ್ನು ಆಕರ್ಷಿಸುತ್ತಿವೆ. ಹಳೇ ತಲೆಮಾರಿನ ನಾಟಕ ಪ್ರಸ್ತುತ ದಿನಗಳಲ್ಲಿ ಯಾಕೆ ರುಚಿಸುತ್ತಿಲ್ಲ ಎಂಬುದರ ಬಗ್ಗೆ ತುಳು ಸಾಹಿತ್ಯ ಅಕಾಡಮಿ ಅಧ್ಯಯನ ನಡೆಸಬೇಕು. ಮಾತ್ರವಲ್ಲದೆ, ತುಳು ನಾಟಕಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಬೇಕೆಂದರು.
ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಸಮಾರೋಪ ಭಾಷಣ ಮಾಡಿದರು.ತುಳು ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಲ್ ಬೈಲ್, ಉಪಸ್ಥಿತರಿದ್ದರು.
ಅಕಾಡಮಿ ಸದಸ್ಯ ಎ.ಶಿವಾನಂದ ಕರ್ಕೇರ ಸ್ವಾಗತಿಸಿದರು. ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ವಂದಿಸಿದರು. ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿದರು.
ಹೆಸರಾಂತ ನಾಟಕ ಪ್ರದರ್ಶನ : ಎಂಟು ದಿನಗಳ ‘ತುಳು ನಾಟಕ ಪರ್ಬ’ದಲ್ಲಿ ಹಿರಿಯ ರಂಗ ಸಾಧಕರ ನೆನಪು ಮತ್ತು ಅವರ ಹೆಸರಾಂತ ನಾಟಕ ಪ್ರದರ್ಶನ ನಡೆಯಿತು.
Comments are closed.