ಮಂಗಳೂರು, ಎಪ್ರಿಲ್.13: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿರುವ ಆರು ಮಂದಿಗೆ ಮಂಗಳೂರಿನ ಜೆಎಂಎಫ್‌ಸಿ ಹಾಗೂ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ನಿವೃತ್ತ ಸರಕಾರಿ ಉದ್ಯೋಗಿಯನ್ನು ಮಸಾಜ್ ನೆಪದಲ್ಲಿ ನಂಬಿಸಿ ಬಳಿಕ ಹನಿಟ್ರ್ಯಾಪ್ ಮೂಲಕ 3 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ಆರು ಮಂದಿಯನ್ನು ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದರು.
ನಗರದ ಜೈಲು ರೋಡ್ ನಿವಾಸಿ ಪ್ರೀತೇಶ್ (36), ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಳಸದ ರವಿ (42), ಪಡೀಲ್ ಕೋಡಕ್ಕಲ್ ನಿವಾಸಿ ರಮೇಶ್ (35) ಮತ್ತು ಮೂವರು ವಿವಾಹಿತ ಮಹಿಳೆಯರು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರು.
ಬಳಿಕ ಜೆಎಂಎಫ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ಆರೋಪಿಗಳಿಗೆ ಅಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡ ಕಾರಣ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲೂ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಹಾಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ.
ನಿವೃತ್ತ ಸರಕಾರಿ ಉದ್ಯೋಗಿ, ಮೇರಿಹಿಲ್ ನಿವಾಸಿಯೊಬ್ಬರನ್ನು ಯುವತಿಯರಿಂದ ಮಸಾಜ್ ಮಾಡಿಸುವ ನೆಪದಲ್ಲಿ ನಂಬಿಸಿ ಬಾಡಿಗೆ ಮನೆಯೊಂದಕ್ಕೆ ಕರೆಯಿಸಿಕೊಂಡಿ ದ್ದರು. ವ್ಯಕ್ತಿ ಮಹಿಳೆಯರಿದ್ದ ಮನೆಗೆ ತೆರಳಿದ ಕೂಡಲೇ ಮೂವರು ಯುವಕರು ಏಕಾಏಕಿ ಪ್ರವೇಶಿಸಿ ವ್ಯಕ್ತಿಯನ್ನು ನಗ್ನಗೊಳಿಸಿ ಯುವತಿಯರ ಜತೆ ವೀಡಿಯೊ ಹಾಗೂ ಫೋಟೊ ತೆಗೆದು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಒಡ್ಡಿದ್ದರು. ಈ ಸಂದರ್ಭ ಹೆದರಿದ ನಿವೃತ್ತ ಸರಕಾರಿ ಉದ್ಯೋಗಿ 3 ಲಕ್ಷ ರೂ. ಹಣವನ್ನು ಆರೋಪಿ ರವಿ ಎಂಬಾತನ ಖಾತೆಗೆ ಜಮೆ ಮಾಡಿದ್ದರು. ಮತ್ತೆ ಹಣಕ್ಕೆ ಬೇಡಿಕೆಯಿಟ್ಟ ಕಾರಣ ಬೇರೆ ದಾರಿ ಕಾಣದೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಸಿಸಿಬಿ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಿದ್ದರು.
Comments are closed.