ಮಂಗಳೂರು: ‘ ಸಂಘ-ಸಂಸ್ಥೆಗಳು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಳ್ಳುವುದು ಸಾಮಾನ್ಯ. ಆದರೆ ಪತ್ರಿಕೆ ಮತ್ತು ಸಾಹಿತ್ಯ ಕೃತಿಗಳ ಪ್ರಕಟಣೆಯಿಂದ ಅವು ಶಾಶ್ವತ ನೆಲೆ ಕಂಡುಕೊಳ್ಳತ್ತವೆ’ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದ್ದಾರೆ. ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಕುಡ್ಲ ಪೆವಿಲಿನ್ ಸಭಾಂಗಣದಲ್ಲಿ ‘ಸದಾಶಯ’ ತ್ರೈಮಾಸಿಕದ ‘ಬಿಸು ಸಂಚಿಕೆ’ ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ ಸಮಾಜದಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸೂಕ್ತ ವೇದಿಕೆ ಒದಗಿಸುವುದರೊಂದಿಗೆ ವರ್ಷದಲ್ಲಿ ಒಂದೆರಡು ಮೌಲಿಕ ಗ್ರಂಥಗಳನ್ನು ಹೊರತರುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಸಂಘಟನೆಗಳ ಗುರಿಯಾಗಬೇಕು’ ಎಂದವರು ನುಡಿದರು.
ಪುತ್ತೂರು ಮಹಿಳಾ ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಪರಿಸರ ಚಿಂತಕ ಡಾ.ನರೇಂದ್ರ ರೈ ದೇರ್ಲ ‘ಬಿಸು ಸಂದೇಶ’ನೀಡಿ ಮಾತನಾಡುತ್ತಾ ‘ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ತುಳುವರ ಆಚರಣೆಯ ಮೂಲಕ ನಮ್ಮ ಮುಂದಿನ ಜನಾಂಗದಲ್ಲಿ ನಿಸರ್ಗದ ಜೊತೆಗಿನ ಒಡನಾಟದ ಬಗೆಗಿನ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಬೇಕಿದೆ ‘ ಎಂದರು.
ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮೈನಾ ಎ.ಶೆಟ್ಟಿ ಬಿಸುಕಣಿ ಇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಸು ಸಮ್ಮಾನ :
ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಭಾಸ್ಕರ ಕೆ. ಹಾಗೂ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ‘ಬಿಸು-ತುಳುವರ ಯುಗಾದಿ’ ವಿಶೇಷ ಗೌರವದೊಂದಿಗೆ ಸನ್ಮಾನಿಸಲಾಯಿತು.
ಸದಾಶಯದ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಭಂಡಾರಿ ಬಿಲ್ಡರ್ಸ್ ಆಡಳಿತ ನಿರ್ದೇಶಕ ಲಕ್ಷ್ಮೀಶ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಕಾರ್ಯಾಧ್ಯಕ್ಷ ಕೆ.ಅಮರನಾಥ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ ಸಾನಿಧ್ಯ ಕಾರ್ಯಕ್ರಮ ನಿರೂಪಿಸಿದರು. ಸಂಪಾದಕ ಬಳಗದ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು. ಬಳಿಕ ‘ಬಿಸು ಪದರಂಗಿತ’ ಜರಗಿತು.
ಬಿಸು ಕವಿಕೂಟ :
ಕಾರ್ಯಕ್ರಮದ ಅಂಗವಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಯೋಜನೆಯಲ್ಲಿ ‘ತುಳು ಕವಿಗೋಷ್ಢಿ’ ಜರಗಿತು.
ಕವಿಗಳಾಗಿ ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ನಾರಾಯಣ ರೈ ಕುಕ್ಕುವಳ್ಳಿ, ಅಂಡಾಲ ಗಂಗಾಧರ ಶೆಟ್ಟಿ, ಹ.ಸು.ಒಡ್ಡಂಬೆಟ್ಟು, ಹರೀಶ್ ಶೆಟ್ಟಿ ಸೂಡ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಶಾರದಾ ಶೆಟ್ಟಿ ಕಾವೂರು, ವಿಜಯಾ ಶೆಟ್ಟಿ ಸಾಲೆತ್ತೂರು, ದೇವಿಕಾ ನಾಗೇಶ್, ಅಕ್ಷಯ ಆರ್.ಶೆಟ್ಟಿ ಪೆರಾರ, ಮಾಲತಿ ಶೆಟ್ಟಿ ಮಾಣೂರು, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಆಶಾ ದಿಲೀಪ್ ರೈ ಸುಳ್ಯಮೆ, ವಿಜಯಲಕ್ಷ್ಮಿ ಪಿ.ರೈ ಕಲ್ಲಿಮಾರ್, ಮಲ್ಲಿಕಾ ಜೆ.ರೈ ಗುಂಡ್ಯಡ್ಕ, ರಾಜಶ್ರೀ ತಾರಾನಾಥ ರೈ, ವಿದ್ಯಾಶ್ರೀ ಎಸ್.ಶೆಟ್ಟಿ, ಸನ್ನಿಧಿ ಟಿ.ಶೆಟ್ಟಿ ಪೆರ್ಲ ತಮ್ಮ ಕವಿತೆಗಳನ್ನು ವಾಚಿಸಿದರು. ತುಳು ಭಾಷೆ, ಸಂಪ್ರದಾಯ ಮತ್ತು ಆಚರಣೆಗಳು ಕವಿತೆಗೆ ವಸ್ತುಗಳಾಗಿದ್ದವು. ಕೊನೆಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಮತದಾನದ ಮಹತ್ವದ ಬಗೆಗೆ ಬರೆದ -‘ ಓಟು ಪಾಡ್ ಗ ನಮ ಓಟು ಪಾಡ್ ಗ !ಅಣ್ಣ ಬಲೆ ಅಕ್ಕ ಬಲೆ ಓಟು ಪಾಡ್ ಗ ! ‘
ಈ ಕವನದೊಂದಿಗೆ ಕವಿಗೋಷ್ಠಿ ಸಂಪನ್ನಗೊಂಡಿತು.
Comments are closed.