ಕರಾವಳಿ

ಜಿಲ್ಲೆಯಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆ

Pinterest LinkedIn Tumblr

ಕಾರ್ತಿಕ್‌ರಾಜ್‌

ಮಂಗಳೂರು: ಕೊಣಾಜೆಯ ಅಸೈಗೋಳಿಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ಜಿಲ್ಲೆಯಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಆರೋಪಿಗಳಾದ ಕಾರ್ತಿಕ್‌ರಾಜ್‌ ತಂಗಿ ಕಾವ್ಯಶ್ರೀ, ಕುತ್ತಾರು ಸಂತೋಷ ನಗರದ ಗೌತಮ್‌ ಮತ್ತು ಆತನ ಸೋದರ ಗೌರವ್‌ ಅವರನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

ಕೊಣಾಜೆ ಬಳಿಯ ಅಸೈಗೋಳಿಯಲ್ಲಿ 2016, ಅ.22 ರಂದು ಕೃತ್ಯ ನಡೆದಿತ್ತು. ಪೊಲೀಸ್ ತನಿಖೆಯಲ್ಲಿ ತಂಗಿಯೇ ಕೊಲೆಗೆ ಸುಪಾರಿ ನೀಡಿದ್ದು ಎನ್ನಲಾಗಿದ್ದು, ಸದ್ಯ ಸಾಕ್ಷ್ಯ ಕೊರತೆಯಿಂದ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

ಬಹಳಷ್ಟು ಕುತೂಹಲ ಮತ್ತು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಫಜೀರು ಸುದರ್ಶನ ನಗರದ ಕಾರ್ತಿಕ್‌ರಾಜ್‌ ಕೊಲೆ ಪ್ರಕರಣದ ಆರೋಪಿಗಳ ಮೇಲಣ ಆರೋಪ ಸಾಬೀತಾಗಿಲ್ಲ ಎಂಬ ತೀರ್ಮಾನಕ್ಕೆ ಬಂದು ನ್ಯಾಯಾಧೀಶರಾದ ಕೆ.ಎಸ್‌. ಬೀಳಗಿ ಅವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳನ್ನು 2017 ಎ. 29ರಂದು ಬಂಧಿಸಲಾಗಿದ್ದು, ಸರಿಯಾಗಿ ಒಂದು ವರ್ಷದೊಳಗೆ ವಿಚಾರಣೆ ಮುಕ್ತಾಯಗೊಂಡು ಆರೋಪಿಗಳು ದೋಷಮುಕ್ತ ಹೊಂದಿದ್ದಾರೆ.

ಸಹೋದರಿಯಿಂದಲೇ ಕೊಲೆಗೆ ಒಳಸಂಚು, ಆರೋಪ :

ಮೃತ ಕಾರ್ತಿಕ್‌ರಾಜ್‌ನ ಸಹೋದರಿ ಕಾವ್ಯಶ್ರೀ ಅವರು ಶಾಶ್ವತ್‌ ಅವರನ್ನು ಮದುವೆಯಾಗಿದ್ದರು. ಪ್ರಕರಣದ ಒಂದನೇ ಆರೋಪಿ ಗೌತಮ್‌ ಕಯ್ಯ ಜತೆಯಲ್ಲಿ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಸಂಸಾರದಲ್ಲಿ ಹೊಂದಿಕೊಳ್ಳದೆ ಕಾವ್ಯಶ್ರೀ ತಾಯಿ ಮನೆಯಾದ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸುದರ್ಶನ ನಗರಕ್ಕೆ ಬಂದು ವಾಸಿಸಲು ಆರಂಭಿಸಿದ್ದಕ್ಕೆ ಆಕೆಯ ಅಣ್ಣ ಕಾರ್ತಿಕ್‌ರಾಜ್‌ ಆಕ್ಷೇಪಿಸಿ ಜಗಳ ತೆಗೆದಿದ್ದರು.

ಈ ಕಾರಣಕ್ಕಾಗಿ ಕಾವ್ಯಶ್ರೀ ಬೇರೆ ಮನೆ ಮಾಡಿ ವಾಸ ಮಾಡುತ್ತಿದ್ದು, ತನ್ನ ಅಣ್ಣನು ತಾಯಿ ಮನೆಯಲ್ಲಿ ಇರುವುದನ್ನು ಕಂಡು ಮತ್ತು ವಾಪಸ್‌ ಕಾವ್ಯಶ್ರೀ ಗಂಡ ಶಾಶ್ವತ್‌ ಮನೆಗೆ ಹೋಗಲು ಒತ್ತಾಯಿಸಿದ ದ್ವೇಷದಿಂದ ಕಾವ್ಯಶ್ರೀ ತನ್ನ ಅಣ್ಣ ಕಾರ್ತಿಕ್‌ರಾಜ್‌ನನ್ನು ಕೊಲೆ ಮಾಡಬೇಕೆಂದು ಉದ್ದೇಶಿಸಿದ್ದರು ಹಾಗೂ ಕೊಲೆ ಮಾಡುವ ಬಗ್ಗೆ ತನ್ನ ಪ್ರಿಯಕರ ಗೌತಮ್‌ ಕಯ್ಯನ ಜತೆಗೂಡಿ ಒಳಸಂಚು ನಡೆಸಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಅದರಂತೆ 2016ರ ಅ. 22ರಂದು ಗೌತಮ್‌ ಕಯ್ಯ ಮತ್ತು ಗೌರವ್‌ ಕಯ್ಯ ಅವರು ಕಬ್ಬಿಣದ ರಾಡ್‌, ಸುತ್ತಿಗೆ ಮತ್ತು ಮೆಣಸಿನ ಹುಡಿಯನ್ನು ಹಿಡಿದು ಕೊಂಡು ಮನೆಯಿಂದ ಹೊರಟು ಕೊಣಾಜೆ ಗ್ರಾಮದ ಗಣೇಶ ಮಹಲ್‌ ಎಂಬಲ್ಲಿಗೆ ಬಂದು ರಸ್ತೆ ಬದಿಯ ಪೊದೆಯಲ್ಲಿ ಅಡಗಿ ಕುಳಿತಿದ್ದರು.

ಬೆಳಗ್ಗೆ 5.30 ಗಂಟೆಗೆ ಪಜೀರು ಕಡೆಯಿಂದ ಜಾಗಿಂಗ್‌ ಮಾಡಿಕೊಂಡು ಬರುತ್ತಿದ್ದ ಕಾರ್ತಿಕ್‌ರಾಜ್‌ನನ್ನು ನೋಡಿದ ಆರೋಪಿಗಳು, ಬೈಕ್‌ ಕೆಟ್ಟು ಹೋಗಿದೆ ಎಂದು ನೆಪ ಹೇಳಿದರು. ಆಗ ಕಾರ್ತಿಕ್‌ರಾಜ್‌ ಬೈಕ್‌ ಅನ್ನು ನೋಡುತ್ತಿದ್ದಂತೆ 2ನೇ ಆರೋಪಿ ಗೌರವ್‌ ಕಯ್ಯ, ಕಾರ್ತಿಕ್‌ರಾಜ್‌ನ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದು ಗೌತಮ್‌ ಕಯ್ಯ ಹಿಂದಿನಿಂದ ಬಂದು ಕಾರ್ತಿಕ್‌ರಾಜ್‌ನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದನು. ಗಾಯಗೊಂಡ ಕಾರ್ತಿಕ್‌ರಾಜ್‌ ಮರುದಿನ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಇದೀಗ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿ ಕೊಂಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್‌. ಬೀಳಗಿ ಅವರು 33 ಜನ ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದರು. 1 ಮತ್ತು 2ನೇ ಆರೋಪಿಗಳ ಪರವಾಗಿ ವಕೀಲರಾದ ವೇಣು ಕುಮಾರ್‌ ಮತ್ತು ಯುವರಾಜ್‌ ಕೆ. ಅಮೀನ್‌ ವಾದಿಸಿದ್ದು, 3ನೇ ಆರೋಪಿ ಕಾವ್ಯಶ್ರೀ ಪರವಾಗಿ ದಯಾನಂದ ಎ. ಅವರು ವಾದಿಸಿದ್ದರು.

Comments are closed.