ಕರಾವಳಿ

ಮಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿಯ “ಸಾಧನೆಯ ಹಾದಿಯಲಿ” ಪುಸ್ತಕ ಸುಳ್ಳಿನ ಕಂತೆಗಳು : ರೂಪಾ ಡಿ ಬಂಗೇರ ಆರೋಪ

Pinterest LinkedIn Tumblr

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಜೆ.ಆರ್. ಲೋಬೋ ಬಿಡುಗಡೆಗೊಳಿಸಿರುವ ‘ಸಾಧನೆಯ ಹಾದಿಯಲಿ’ ಪುಸ್ತಕ ಸುಳ್ಳುಗಳ ಕಂತೆ ಎಂದು ಬಿಜೆಪಿಯ ಕಾರ್ಪೊರೇಟರ್ ರೂಪಾ ಡಿ. ಬಂಗೇರ ಆರೋಪಿಸಿದ್ದಾರೆ.

ಬಿಜೆಪಿಯ ಮಂಗಳೂರು ದಕ್ಷಿಣ ಚುನಾವಣಾ ಕಚೇರಿಯಲ್ಲಿಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಉಪಯೋಗಿಸಿ ತನ್ನ ಸಾಧನೆ ಎಂಬುದಾಗಿ ಶಾಸಕರು ಬಿಂಬಿಸಿದ್ದಾರೆ ಎಂದು ಆರೋಪಿಸಿದರು.

ಜೊತೆಗೆ ಜೆ.ಆರ್ ಲೋಬೋ ಅವರ ಸಾಧನೆಯ ಹಾದಿಯಲಿ ಪುಸ್ತಕವನ್ನು ‘ಫೇಲ್’ ಎಂಬ ಒಕ್ಕಣೆಯೊಂದಿಗೆ ಮಾಧ್ಯಮದೆದುರು ಬಿಡುಗಡೆಗೊಳಿಸಲಾಯಿತು.

ಶಾಸಕರು ತಮ್ಮ ಪುಸ್ತಕದಲ್ಲಿ ನೀಡಿರುವ ಅಂಕಿಅಂಶಗಳು ಸುಳ್ಳು. ಪ್ರೀಮಿಯಂ ಎಫ್ಎಆರ್ ಅನುದಾನವನ್ನು ಕಾನೂನು ಮೀರಿ ಬಳಸಲಾಗಿದೆ. ಕದ್ರಿ ಪಾರ್ಕ್ನಲ್ಲಿ ಪುಟಾಣಿ ರೈಲಿಗೆ ರಾತ್ರಿ ವೇಳೆ ಮುಖ್ಯಮಂತ್ರಿ ಬಂದು ಹಸಿರು ಬಾವುಟ ತೋರಿಸಿದ್ದರೂ ಇನ್ನೂ ರೈಲು ಮಾತ್ರ ಓಡುತ್ತಿಲ್ಲ. ಸಂಗೀತ ಕಾರಂಜಿಗೆ ಅಡಿಗಲ್ಲು ಹಾಕಿ ಅನುದಾನ ಬಿಡುಗಡೆ ಮಾಡಿಸಿದ್ದು, ಹಿಂದಿನ ಬಿಜೆಪಿ ಶಾಸಕರು. ಆಶ್ರಯ ಯೋಜನೆಯಡಿ ಬಹುಮಹಡಿ ಕಟ್ಟಡದ ಜಿ+3 ಮಾದರಿಯ ಕಲ್ಪನೆ ಮತ್ತು ನಿಯಮ ರೂಪುಗೊಂಡಿದ್ದು ಬಿಜೆಪಿ ಅಧಿಕಾರಾವಧಿಯಲ್ಲಿ ಎಂದು ರೂಪಾ ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಆಗಿತ್ತು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿದ್ದರೆ, ಜನರಿಗೆ ಸಾಧನೆಯ ಬಗ್ಗೆ ತಿಳಿಯುತ್ತಿತ್ತು. ಆದರೆ ಯಾವುದೇ ರೀತಿಯ ಸ್ಪಷ್ಟ ದಾಖಲೆ, ಮಾಹಿತಿ ಇಲ್ಲದೆ, ಅಂತೆಕಂತೆಗಳನ್ನು ಒಳಗೊಂಡ ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಶಾಸಕರು ಮೋಸ ಮಾಡಿದ್ದಾರೆ ಎಂದು ರೂಪಾ ಆರೋಪಿಸಿದರು.

ನಗರೋತ್ಥಾನ ಯೋಜನೆಯಡಿ ಬಿಜೆಪಿ ಅವಧಿಯಲ್ಲಿ 200 ಕೋಟಿ ರೂ. ಬಿಡುಗಡೆಯಾಗಿ, 129 ಕೋಟಿ ರೂ.ಗಳ ಅನುದಾನದಲ್ಲಿ ಪ್ರಮುಖ ರಸ್ತೆ, ಅಭಿವೃದ್ಧಿ, ಅಗಲೀಕರಣಗೊಂಡಿದೆ. ಬಿಜೆಪಿ ಅವಧಿಯಲ್ಲಿ ಶೇ. 89ರಷ್ಟು ಈ ಹಣ ಸದ್ಬಳಕೆಯಾಗಿದೆ. ಆದರೆ ಕಾಂಗ್ರೆಸ್ ತನ್ನ ಅವಧಿಯಲ್ಲಿ ಕೇವಲ 100 ಕೋಟಿ ರೂ.ಗಳನ್ನು ಮಾತ್ರವೇ ಮಂಜೂರು ಮಾಡಿತ್ತು. ಅದರಲ್ಲಿ ಬಿಡುಗಡೆಯಾಗಿದ್ದು ಕೇವಲ 59.99 ಕೋಟಿ ರೂ. ಎಂದು ರೂಪಾ ಡಿ. ಬಂಗೇರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರು,ಭಾಸ್ಕರ ಚಂದ್ರ ಶೆಟ್ಟಿ, ಕಾರ್ಪೊರೇಟರ್ ನವೀನ್ ಚಂದ್ರ ಉಪಸ್ಥಿತರಿದ್ದರು.

Comments are closed.