ಕರಾವಳಿ

ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸುವ ಸಲಹೆ ನನ್ನದೆಂಬ ಆರೋಪ ರಾಜಕೀಯ ಪ್ರೇರಿತ: ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಳಿಗೆ ಕೊಲ್ಲೂರಿನ ಅನುದಾನ ನಿಲ್ಲಿಸಲು ನಾನು ಸಲಹೆ ನೀಡಿದ್ದೆ ಎನ್ನುವ ಸಚಿವ ರಮಾನಾಥ ರೈ ಹೇಳಿಕೆಯ ಹಿಂದೆ ಬೈಂದೂರು ಶಾಸಕ ಗೋಪಾಲ ಪೂಜಾರಿಯ ಕುಮ್ಮಕ್ಕು ಇದೆ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ, ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಸೋಲಿನ ಹತಾಶೆಯಿಂದ ಬೈಂದೂರು ಶಾಸಕರು ರಮಾನಾಥ ರೈ ಅವರ ಮೂಲಕ ಹೀಗೆ ಹೇಳಿಸಿದ್ದಾರೆ ಎಂದು ಸುಕುಮಾರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಕಲ್ಲಡ್ಕ ಮತ್ತು ಪುಣಚದ ಶಾಲೆಗಳಿಗೆ ಪ್ರತಿ ತಿಂಗಳು ಬಿಸಿಯೂಟಕ್ಕೆ ಅನುದಾನವಾಗಿ ಕೊಲ್ಲೂರು ದೇವಳದಿಂದ ರವಾನೆಯಾಗುತ್ತಿದ್ದ 4.5 ಲಕ್ಷ ರೂಪಾಯಿಗಳ ಅನುದಾನ ಸ್ಥಗಿತಗೊಳಿಸುವಂತೆ ಸುಕುಮಾರ ಶೆಟ್ಟಿ ನನಗೆ ಸಲಹೆ ನೀಡಿದ್ದರು, ಈ ಅನುದಾನ ಭಕ್ತರು ನೀಡುವ ಹಣದ ಹಗಲು ದರೋಡೆಯಾಗಿದೆ ಎಂದು ಸುಕುಮಾರ ಶೆಟ್ಟಿ ನನಗೆ ಹೇಳಿದ್ದರು ಎಂದು ಬಂಟ್ವಾಳ ಕ್ಷೇತ್ರದ ಪ್ರಚಾರ ಸಭೆಯೊಂದರಲ್ಲಿ ಸಚಿವ ರಮಾನಾಥ ರೈ ಹೇಳಿದ್ದರು.

ರೈ ಅವರ ಈ ಹೇಳಿಕೆ ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿತ್ತು. ಶಾಲಾ ಮಕ್ಕಳ ಬಿಸಿಯೂಟವನ್ನು ರೈ ಕಸಿದುಕೊಂಡಿದ್ದಾರೆ ಎಂದು ಬಿಜೆಪಿ ಕಳೆದೊಂದು ವರ್ಷದಿಂದ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈ ಅವರ ಈ ಹೇಳಿಕೆ ಮಹತ್ವ ಪಡೆದಿತ್ತು.

ಹೆಮ್ಮಾಡಿಯಲ್ಲಿರುವ ಬೈಂದೂರು ಮಂಡಲದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ ಶೆಟ್ಟಿ, ರಮಾನಾಥ ರೈ ಅವರು ಹಿಂದೆಂದೂ ಈ ರೀತಿ ಹೇಳಿರಲಿಲ್ಲ. ಈಗ ಧಿಡೀರ್ ಆಗಿ ಚುನಾವಣಾ ಸಮಯದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ರೈ ಅವರಿಗೂ ಈ ರೀತಿಯ ಹೇಳಿಕೆ ಅವರ ಕ್ಷೇತ್ರದಲ್ಲಿ ಸ್ವಲ್ಪ ಮತಗಳನ್ನು ತಂದು ಕೊಡಬಹುದೆಂಬ ಭಾವನೆ ಇರಬಹುದು. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಶಾಸಕರು ರಮಾನಾಥ ರೈ ಅವರ ಮೂಲಕ ಹೀಗೆ ಹೇಳಿಸಿದ್ದಿರಬಹುದು ಎಂದು ಹೇಳಿದರು.

“ನಾನು ಕೊಲ್ಲೂರು ದೇವಳದ ಧರ್ಮದರ್ಶಿಯಾಗಿದ್ದಾಗ ತಾಲೂಕಿನ ವಿವಿಧ ಶಾಲೆಗಳಿಗೆ ಜಾತಿಮತ ಭೇದವಿಲ್ಲದೆ ಸರ್ಕಾರಿ, ಖಾಸಗಿ, ಕ್ರಿಶ್ಚಿಯನ್ ಸ್ಕೂಲ್ ಎಂಬುದನ್ನು ಲೆಕ್ಕಿಸದೆ 23, 500 ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ವ್ಯವಸ್ಥೆ ಮಾಡಿದ್ದೆ.

ಕರ್ನಾಟಕ ಸರ್ಕಾರ ಬಿಸಿಯೂಟ ಯೋಜನೆ ಆರಂಭಿಸುವ ಮೊದಲೇ ನಾನು ಕೊಲ್ಲೂರು ದೇವಾಲಯದ ಮೂಲಕ ಈ ಯೋಜನೆ ಆರಂಭಿಸಿದ್ದೆ. ಕಾಲೇಜು ದಿನಗಳಿಂದಲೇ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಲೇ ಬಂದಿದ್ದೇನೆ.

ಸಾವಿರಾರು ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ನೆರವಾಗಿದ್ದೇನೆ. ವಿದ್ಯಾರ್ಥಿಗಳೆಂದರೆ ನನಗೆ ತುಂಬಾ ಪ್ರೀತಿ. ಹಸಿದ ಮಕ್ಕಳು ವಿದ್ಯೆ ಕಲಿಯಲು ಸಾಧ್ಯವಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹಸಿದ ಹೊಟ್ಟೆಗೆ ಯಾರೇ ಅನ್ನ ನೀಡಿದರೂ ನಾನು ಅದಕ್ಕೆ ವಿರೋಧ ಮಾಡಲು ಸಾಧ್ಯವೇ ಇಲ್ಲ” ಎಂದು ಸುಕುಮಾರ ಶೆಟ್ಟಿ ಹೇಳಿದರು.

“ರಮಾನಾಥ ರೈ ಅವರು ನನ್ನ ಕಾಲೇಜು ದಿನಗಳ ಸ್ನೇಹಿತರು. ಇತ್ತೀಚೆಗೆ ಅವರ ಜೊತೆ ಮಾತಾಡಿದ್ದಾಗಲಿ, ಭೇಟಿ ಮಾಡಿದ್ದಾಗಲಿ ಇಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ. ನಮ್ಮಿಬ್ಬರ ಸಂಬಂಧಕ್ಕೆ ಹುಳಿ ಹಿಂಡಲು ರೈ ಇಂತಹ ಹೇಳಿಕೆ ಕೊಟ್ಟಿರಬಹುದು” ಎಂದು ಸುಕುಮಾರ ಶೆಟ್ಟಿ ಅಭಿಪ್ರಾಯಪಟ್ಟರು.

ಬೈಂದೂರು ಕ್ಷೇತ್ರದಾದ್ಯಂತ ಈ ಬಾರಿ ಬಿಜೆಪಿ ಅಲೆ ಎದ್ದಿದ್ದು ತನ್ನ ಗೆಲುವು ನಿಶ್ಚಿತ ಎಂದು ಸುಕುಮಾರ ಶೆಟ್ಟಿ ಹೇಳಿದ್ದಾರೆ. ಕ್ಷೇತ್ರದ ಯುವಜನತೆ ನನ್ನ ಜೊತೆಗಿದ್ದಾರೆ. ಗೋಪಾಲ ಪೂಜಾರಿ ಶಾಸಕರಾಗಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ. ಬೈಂದೂರಿನ ಮತದಾರರು ಈ ಬಾರಿ ಬಿಜೆಪಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಸುಕುಮಾರ ಶೆಟ್ಟಿ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Comments are closed.