ಕರಾವಳಿ

ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಾನೂನು ಕ್ರಮ

Pinterest LinkedIn Tumblr

ಮಂಗಳೂರು, ಮೇ 10: ಚುನಾವಣೆಯ ಹಿನ್ನೆಲೆಯಲ್ಲಿ ಮತ ಪ್ರಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳನ್ನೂ ಇಲೆಕ್ಟ್ರಾನಿಕ್ ಮಾಧ್ಯಮವಾಗಿ ಪರಿಗಣಿಸಲಾಗುತ್ತಿದ್ದು, ಅವುಗಳ ಮೇಲೂ ಚುನಾವಣಾ ಆಯೋಗ ನಿಗಾ ಇರಿಸಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿಗಳ ಪರ ಮತ ಪ್ರಚಾರ, ಸೇರಿದಂತೆ ಯಾವುದೇ ಪ್ರಕ್ರಿಯೆಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಕಾಶ ಇರುವುದಿಲ್ಲ. ಹಾಗಾಗಿ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಚುನಾವಣಾ ಸಂಬಂಧಿ ವಿಚಾರಗಳನ್ನು ರೆಕಾರ್ಡಿಂಗ್ ಮಾಡಿಕೊಳ್ಳಲಿದೆ.

ಚುನಾವಣಾ ನೀತಿ ಸಂಹಿತೆಯ ಗಂಭೀರ ಉಲ್ಲಂಘನಾ ಪ್ರಕರಣಗಳಿದ್ದಲ್ಲಿ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಚುನಾವಣೆಗೆ ಸಂಬಂಧಿಸಿ ಯಾವುದೇ ರೀತಿಯ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವೇಳೆ ಎಚ್ಚರವಹಿಸುವುದು ಅಗತ್ಯ ಎಂದು ಅವರು ಹೇಳಿದರು.

ಸ್ಲಿಪ್ ಕಡ್ಡಾಯವಲ್ಲ  ;

ಈಗಾಗಲೇ ಜಿಲ್ಲೆಯಲ್ಲಿ ಶೇ. 80ರಷ್ಟು ಮತದಾರರ ಸ್ಲಿಪ್‌ಗಳನ್ನು ವಿತರಿಸಲಾಗಿದೆ. ಆದರೆ ಕೆಲವೊಂದು ಕಡೆಗಳಲ್ಲಿ ಇನ್ನೂ ಮತದಾರರಿಗೆ ಸ್ಲಿಪ್‌ಗಳು ದೊರಕದಿರುವ ಬಗ್ಗೆ ಮಾಹಿತಿ ಇದೆ. ಚುನಾವಣೆಯ ದಿನದಂದು ಚುನಾವಣಾ ಮತಗಟ್ಟೆಗಳಲ್ಲಿ ಬಿಎಲ್‌ಒಗಳಿಂದ ಇದನ್ನು ಪಡೆಯಬಹುದು.

ಆದರೆ ಮತದಾನಕ್ಕೆ ಮತದಾರರ ಸ್ಲಿಪ್ ಕಡ್ಡಾಯವಲ್ಲ. ಬದಲಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡವರು ಮತದಾರರ ಚೀಟಿ (ವೋಟರ್ ಐಡಿ) ಅಥವಾ ಇತರರ 12 ಪೂರಕ ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮತದಾರರಿಗೆ ನೆರವಾಗಲು ಮತಗಟ್ಟೆಯ ಹೊರಭಾಗದಲ್ಲಿ ಆಯಾ ಮತಗಟ್ಟೆಯ ಕ್ಷೇತ್ರದ ಬಗ್ಗೆ ವಿವರ, ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಲಗತ್ತಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳಿದ್ದು, ಈ ಪೈಕಿ 97 ಮತಗಟ್ಟೆಗಳಿಗೆ ವೆಬ್ ಕ್ಯಾಮ್ ಅಳವಡಿಸಲಾಗಿದೆ. 221 ಮತಗಟ್ಟೆಗಳಿಗೆ ಮೈಕ್ರೋ ಒಬ್ಸರ್ವರ್ಸ್‌ಗಳನ್ನು ನೇಮಕ ಮಾಡಲಾಗಿದೆ ಹಾಗೂ ಉಳಿದ ಮತಗಟ್ಟಿಗೆ ಸಿಪಿಎಂಎಫ್ ಮತ್ತು ವೀಡಿಯೊ ಗ್ರಾಫರ್‌ಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

Comments are closed.