ಮಂಗಳೂರು, ಮೇ 10: ದೇಶದ ಅಭಿವೃದ್ಧಿಯ ಚಿತ್ರಣವನ್ನೇ ಬದಲಾಯಿಸಲು ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಅತ್ಯಂತ ಕೀಳುಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಮನನೊಂದು ‘ಮೋದಿ ಬೆಂಬಲಿಸಿ’ ಅಭಿಯಾನವೊಂದನ್ನು ಗೆಳೆಯರೊಂದಿಗೆ ಸೇರಿ ಆರಂಭಿಸಿದ್ದು, ಇದನ್ನು ಯಶಸ್ವಿಗೊಳಿಸಬೇಕು ಎಂದು ನಗರದ ಹೆಸರಾಂತ ಆರ್ಕಿಟೆಕ್ ಧರ್ಮರಾಜ್ ಹೇಳಿದ್ದಾರೆ.
ಗುರುವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಯಾರ ಪರವೂ ಅಲ್ಲ, ವಿರೋಧವೂ ಅಲ್ಲ. ಪ್ರಧಾನಿ ನರೇಂದ್ರ ಮೋದಿಯನ್ನು ಹತ್ತಿಕ್ಕುವ ವಿಪಕ್ಷಗಳ ಷಡ್ಯಂತ್ರದಿಂದ ಮನನೊಂದು ಅವರ ಪರವಾಗಿ ಅಭಿಯಾನ ಆರಂಭಿಸಿದ್ದೇನೆ. ಅದರೊಂದಿಗೆ ಸ್ವಚ್ಛ ಹಾಗೂ ಸುಂದರ ಮಂಗಳೂರು ಕಟ್ಟುವ ಉದ್ದೇಶವಿದೆ. ಈ ನಿಟ್ಟಿನಲ್ಲಿ 2 ವಾರಗಳಿಂದ ಈ ಅಭಿಯಾನ ಶುರು ಮಾಡಿದ್ದೇನೆ. ಅದಕ್ಕಾಗಿ ವಾಟ್ಸ್‌ಆಯಪ್ ಗ್ರೂಪ್ ರಚಿಸಲಾಗಿದೆ. ಈ ಮಧ್ಯೆ ಕೆಲವು ಮಾಧ್ಯಮಗಳಲ್ಲಿ ತನ್ನ ವಿರುದ್ಧ ಆರೋಪಗಳ ಸುರಿಮಳೆಗೈಯಲಾಗುತ್ತಿದೆ. ಇದರಿಂದ ಮನನೊಂದು ವಸ್ತುಸ್ಥಿತಿಯ ಬಗ್ಗೆ ವಿವರಿಸಲು ಈ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ಒಳ್ಳೆಯ ನಾಯಕರಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶಕರ ಕೊರತೆ ಇದೆ. ಹಾಗಾಗಿ ಮಂಗಳೂರು ಮತ್ತಿತರ ಕಡೆ ಅಭಿವೃದ್ಧಿಯೇ ಆಗಲಿಲ್ಲ. ಕಾಂಗ್ರೆಸ್ ಪಕ್ಷವು ಮುಸ್ಲಿಮ್, ಕ್ರೈಸ್ತರು, ದಲಿತರನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿವೆ. ಆ ಮೂಲಕ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿದೆ. ಹೀಗಾಗಿ ಹಿಂದೂಗಳನ್ನು ಕೇಳುವವರು ಇಲ್ಲವಾಗಿದೆ ಎಂದು ಧರ್ಮರಾಜ್ ಆರೋಪಿಸಿದರು.
ನಿರ್ಭಯಾ ಪ್ರಕರಣ ನಡೆದಾಗ ಯಾರೂ ಅದನ್ನು ಹಿಂದೂ-ಮುಸ್ಲಿಮ್ ಅಂತ ವಿಭಜಿಸಿಲ್ಲ. ಆದರೆ, ಜಮ್ಮುವಿನ ಕಥುವಾ ಪ್ರಕರಣವನ್ನು ಧರ್ಮದ ಆಧಾರದ ಮೇಲೆ ನೋಡಲಾಯಿತು. ರಾಜಕೀಯ ಲಾಭಕ್ಕೋಸ್ಕರ ಇಂತಹ ಷಡ್ಯಂತ್ರ ಯಾಕೆ ನಡೆಯಬೇಕು? ದೇಶದ ಒಳಿತಿಗೋಸ್ಕರ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೋದಿ ಪರ ಅಭಿಯಾನವು ಮುಂದುವರಿಯಲಿದೆ. ಮುಂದಿನ ಲೋಕಸಭಾ ಚುನಾವಣೆಯ ವೇಳೆ ಈ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಲಾಗುವುದು ಎಂದು ಧರ್ಮರಾಜ್ ಹೇಳಿದರು.
ನನಗೆ ಕಾಂಗ್ರೆಸ್ ಪಕ್ಷದಲ್ಲೂ ಹಲವಾರು ಗೆಳೆಯರಿದ್ದಾರೆ. ಆದರೆ, ನಾನು ಈವರೆಗೂ ಕಾಂಗ್ರೆಸ್‌ಗೆ ಮತ ಚಲಾಯಿಸಿಲ್ಲ. ಯಾಕೆಂದರೆ ಅದರ ದಾರಿಯೇ ಸರಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಧರ್ಮರಾಜ್ ಉತ್ತರಿಸಿದರು.
Comments are closed.