ಕುಂದಾಪುರ: ನಿನ್ನೆಯಷ್ಟೇ ಖರೀದಿಸಿದ 220 ಫಲ್ಸರ್ ಬೈಕಿನಲ್ಲಿ ಗೆಳೆಯನೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಎದುರಿನಿಂದ ಬಂದ ಡಸ್ಟರ್ ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಯುವಕ ದಾರುಣವಾಗಿ ಮೃತಪಟ್ಟಿದ್ದು ಸಹ ಸವಾರ ಗಂಭೀರ ಗಾಯಗೊಂದ ಘಟನೆ ಭಾನುವಾರ ತಡರಾತ್ರಿ ಉಡುಪಿ ಜಿಲ್ಲೆಯ ಮರವಂತೆ ಸಮೀಪ ನಡೆದಿದೆ.
ಬೈಂದೂರು ತಾಲೂಕಿನ ತಗ್ಗರ್ಸೆ ನಿವಾಸಿ ಪುನಿತ್ ಪೂಜಾರಿ (21) ಮೃತ ದುರ್ದೈವಿ ಯುವಕ. ಆತನೊಂದಿಗೆ ಬೈಕಿನಲ್ಲಿದ್ದ ಆಕಾಶ್ ಎಂಬಾತನೂ ಗಂಭೀರವಾಗಿ ಗಾಯಗೊಂಡಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪಘಾತದಲ್ಲಿ ಬೈಕಿಗೆ ಬೆಂಕಿ….
ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಬೈಂದೂರಿನ ನಾಗೂರು ಕಡೆಯಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಕಾರಿಗೆ ಮರವಂತೆ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹತ್ತಿ ಊರಿದು ಬೈಕ್ ಸಂಪೂರ್ಣ ಭಸ್ಮಗೊಂಡಿತ್ತು. ಕಾರಿನ ಮುಂಭಾಗವೂ ಕೂಡ ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸದ ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಬೈಕ್ ಗೆ ತಗುಲಿದ ಬೆಂಕಿಯನ್ನು ನಂದಿಸಿ, ಗಾಯಾಳನ್ನು ಅಂಬುಲೆನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪುನೀತ್ ಪೂಜಾರಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ್ ಪೂಜಾರಿಯವರ ಸಹೋದರನ ಮಗನಾಗಿದ್ದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ. ಅಕಾಶ್ ಕೂಡ ಅದೇ ಕಾಲೇಜಿನ ವಿದ್ಯಾರ್ಥಿ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.