ಮಂಗಳೂರು, ಮೇ 23: ರಾಜ್ಯದಲ್ಲಿ ಇಂದು ಸಂಜೆ ನಡೆಯಲಿರುವ ಹೊಸ ಸರಕಾರ ವಿಶ್ವಾಸ ಮತ ಯಾಚನೆ ಸಂದರ್ಭ ಮಂಗಳೂರಿನಲ್ಲಿ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ದ.ಕ. ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಯನ್ನು ಮುಂದುವರಿಸಿ ದ.ಕ.ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಅವರ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆಯ ನಡುವೆಯೂ ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ಘರ್ಷಣೆ ನಡೆದಿತ್ತು. ಇಂದು ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ (ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಮೇ 25ರ ಬೆಳಗ್ಗೆ 6 ಗಂಟೆಯವರೆಗೆ ಸೆ. 144 ನಿಷೇಧಾಜ್ಞೆಯನ್ನು ಮುಂದುವರಿಸಿ ಆದೇಶ ಹೊರಡಿಸಲಾಗಿದೆ.
ಮಂಗಳೂರಿನಲ್ಲಿ ನಿರ್ಬಂಧ ಆಜ್ಞೆ :
ವಿಶ್ವಾಸ ಮತ ಯಾಚನೆ ಸಂದರ್ಭ ಮಂಗಳೂರು ಮಂಗಳೂರಿನಲ್ಲಿಯೂ ರಾಜಕೀಯ ಘರ್ಷಣೆ ನಡೆಯುವ ಆತಂಕ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಗರದಲ್ಲಿ ಕಲಂ 35 ರ ಅನ್ವಯ ನಿರ್ಬಂಧ ಆಜ್ಞೆಯನ್ನು ಹೊರಡಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ನಾಳೆ ಸಂಜೆ 6 ಗಂಟೆವರೆಗೆ ಈ ನಿರ್ಬಂಧ ಆಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ವಿಜಯೋತ್ಸವ, ರಾಜಕೀಯ ಸಭೆ ಸಮಾರಂಭಗಳ ಮೇಲೆ ನಿಷೇಧ ಹೇರಲಾಗಿದೆ.ಪಟಾಕಿ ಸಿಡಿಸುವುದು, ಅಥವಾ ಇನ್ನಿತರ ಸ್ಪೋಟಕ ವಸ್ತುಗಳನ್ನು ಸಿಡಿಸುವುದನ್ನು ಅಥವಾ ಹೊಂದಿರುವುದನ್ನು ನಿಷೇಧಿಸಲಾಗಿದೆ.
Comments are closed.