ಕರಾವಳಿ

ಖ್ಯಾತ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲ ವಿಧಿವಶ

Pinterest LinkedIn Tumblr

ಮಂಗಳೂರು, ಮೇ 28:ಕಳೆದ ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಾಹಿಸುತ್ತಿದ್ದ ಖ್ಯಾತ ಕ್ಯಾಮರಾ ಮೆನ್ ಕೇಶವ ವಿಟ್ಲ (56 ವರ್ಷ) ಅವರು ಸೋಮವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ವಿಟ್ಲ ಇವರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು.ಕಳೆದ ಕೆಲವು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿನ ಕೆಲವು ಸಮಯದಿಂದ ಕಿಡ್ನಿ ತೊಂದರೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಶವ ವಿಟ್ಲ ಅವರು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಸದ್ಯ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ಗ್ರಾಮೀಣ ಪ್ರದೇಶವಾದ ವಿಟ್ಲದಲ್ಲಿ 1961ರಲ್ಲಿ ಜನಿಸಿದ ಕೇಶವ ವಿಟ್ಲ, 1984ರಲ್ಲಿ ‘ಮುಂಗಾರು’ ಪತ್ರಿಕೆಯ ಮೂಲಕ ಪತ್ರಿಕಾ ಛಾಯಾಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಅನಂತರ 1996ರಿಂದ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಬಳಗದಲ್ಲಿ ಹಲವು ವರ್ಷಗಳ ಕಾಲ ಛಾಯಗ್ರಾಹಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರು ಪ್ರೀಲಾನ್ಸ್ ಪತ್ರಿಕಾ ಛಾಯಗ್ರಾಹಕರಾಗಿ ದಿ ಟೆಲಿಗ್ರಾಫ್, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ಒದಗಿಸುತ್ತಿದ್ದರು.

ಕಳೆದ ವರ್ಷ ಅವರು ಶ್ರಮವಹಿಸಿ ಸಿದ್ದಪಡಿಸಿದ್ದ ಕರ್ನಾಟಕದ ನೈಸರ್ಗಿಕ ಸಂಪತ್ತಿನ ಕಾಫಿ ಟೇಬಲ್ ಪುಸ್ತಕ “ಫೆಸೆಟ್ಸ್ ಆಫ್ ಕರ್ನಾಟಕ ” ಛಾಯಚಿತ್ರ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಈ ಪುಸ್ತಕ ರಾಜ್ಯದಾದ್ಯಂತ ಭಾರೀ ಜನಮನ್ನಣೆ ಪಡೆದಿತ್ತು.

ಕ್ಯಾಮೆರಾ ಕಣ್ಣಿನಿಂದ ಹೊಸ ಲೋಕ ತೋರಿಸಿಕೊಟ್ಟಿದ್ದ ಕೇಶವ ವಿಟ್ಲ, ‘ಫೇಸೆಟ್ಸ್ ಆಫ್ ಕರ್ನಾಟಕ – ಎ ಪಿಕ್ಟೋರಿಯಲ್ ಜರ್ನಿ’ ಕೃತಿಯ ಮೂಲಕ ಕರ್ನಾಟಕದ ಹೊಸ ಒಳನೋಟಗಳನ್ನು ಸೆರೆಹಿಡಿದಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್‌ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಲಿಯೇಂದ್ರ ಪುರಸ್ಕಾರ, ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದರು.

ಮೃತರ ಅಂತ್ಯ ಸಂಸ್ಕಾರವು ಸೋಮವಾರ ಅಪರಾಹ್ನ ವಿಟ್ಲದ ಬೊಬ್ಬೆಕೇರಿಯಲ್ಲಿ ನೆರವೇರಿತು.

Comments are closed.