ಕರಾವಳಿ

ಭಾರೀ ಮಳೆಯಿಂದ ಮಂಗಳೂರಿನಲ್ಲಿ “ಫ್ಯಾನ್ ಪಾರ್ಕ್” ಐಪಿಎಲ್ ವೀಕ್ಷಣೆಗೆ ಅಡ್ಡಿ : ಸಿಡಿಲಿನ ಅರ್ಭಟಕ್ಕೆ ಚೆಲ್ಲಾಪಿಲ್ಲಿಯಾದ ಅಭಿಮಾನಿಗಳು

Pinterest LinkedIn Tumblr

ಮಂಗಳೂರು, ಮೇ 28: ಬಿಸಿಸಿಐನಿಂದ ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಐಪಿಎಲ್ ಫ್ಯಾನ್ ಪಾರ್ಕ್ ಕ್ರಿಕೆಟ್ ಪಂದ್ಯಾಟದ ವೀಕ್ಷಣೆ ಭಾರಿ ಮಳೆಯಿಂದ ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಯಿತು.

ಬಾನುವಾರ ಸಂಜೆ ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಹಾಗೂ ಸ್ಥಳದಲ್ಲಿದ್ದ ಓರ್ವನಿಗೆ ಸಿಡಿಲು ಬಡಿದ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆ ಬಂದಿದ್ದ ಕ್ರಿಕೆಟ್ ಅಭಿಮಾನಿಗಳು ಚೆಲ್ಲಾಪಿಲ್ಲಿಯಾಗಿ ಸ್ಥಳದಿಂದ ಕಾಲ್ಕಿತ ಘಟನೆ ನಡೆದಿದ್ದು, ಪರಿಣಾಮ ಕ್ರಿಕೆಟ್ ವೀಕ್ಷಣೆಯನ್ನು ಪಂದ್ಯಾಟ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಸ್ಥಗಿತಗೊಳಿಸಲಾಗಿದೆ.

ಬಾನುವಾರ ಐಪಿಎಲ್ ಕ್ರಿಕೆಟ್ ಮ್ಯಾಚ್‌ನ ಫೈನಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ನಗರ ನೆಹರೂ ಮೈದಾನದಲ್ಲಿ ಎಲ್‌ಇಡಿ ಪರದೆ ಮೂಲಕ ಸಾರ್ವಜನಿಕರಿಗೆ ಮ್ಯಾಚ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಂಜೆ ಸುಮಾರು 6 ಗಂಟೆಯ ಬಳಿಕ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿತ್ತು. ಮಳೆಯಿಂದಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಅಡಚಣೆಯಾಗಿತ್ತು.

ನೆಹರು ಮೈದಾನದಲ್ಲಿ ದೊಡ್ಡ ಸ್ಕ್ರೀನ್ ಮತ್ತು ಕ್ರಿಕೆಟ್ ಮೈದಾನದ ಅನುಭವ ನೀಡುವ ವ್ಯವಸ್ಥೆಗಳನ್ನು ಬಿಸಿಸಿಐನಿಂದ ಮಾಡಲಾಗಿದ್ದರೂ ಭಾರೀ ಮಳೆಯ ಕಾರಣದಿಂದ ಮಂಗಳೂರು ಜನತೆ ಈ ಕಾರ್ಯಕ್ರಮ ವೀಕ್ಷಿಸುವುದರಿಂದ ವಂಚಿತರಾದರು.

ದೇಶದ 18 ರಾಜ್ಯಗಳ 36 ನಗರದಲ್ಲಿ ಈ ಬಾರಿಯ ಐಪಿಎಲ್ ಫ್ಯಾನ್ ಪಾರ್ಕನ್ನು ಬಿಸಿಸಿಐ ಆಯೋಜಿಸಿದೆ. ಅದರಂತೆ ದೇಶದಲ್ಲಿ ಮೂರು ಕಡೆಗಳಾದ ಮಂಗಳೂರು, ಮುಜಾಫರ್‌ನಗರ ಮತ್ತು ನಾಗಪುರದಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಆಯೋಜಿಸಲಾಗಿತ್ತು. ಐಪಿಎಲ್ ಫ್ಯಾನ್ ಪಾರ್ಕ್‌ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ಕ್ರಿಕೆಟ್ ಕ್ರೀಡಾಂಗಣದಲ್ಲಿ ನೀಡುವ ಅನುಭವದಂತೆ ಕ್ರೀಡಾಭಿಮಾನಿಗಳಿಗೆ ನೀಡುವ ಉದ್ದೇಶವನ್ನಿಟ್ಟುಕೊಂಡು ಆಯೋಜಿಸಲಾಗಿತ್ತು.

ಬಾನುವಾರದ ಐಪಿಎಲ್ ಪಂದ್ಯಾಟದ ವೀಕ್ಷಣೆಗಾಗಿ ಮಂಗಳೂರಿನ ಕ್ರೀಡಾಭಿಮಾನಿಗಳು ಕಾತರರಾಗಿದ್ದರು. ಆದರೆ ಸಂಜೆಯ ನಂತರ ಸುರಿದ ಭಾರಿ ಮಳೆಗೆ ಕಾರ್ಯಕ್ರಮವನ್ನು ಅರ್ಧ ಗಂಟೆಯಲ್ಲಿಯೇ ಸ್ಥಗಿತಗೊಳಿಸಲಾಯಿತು. ಇದೇ ವೇಳೆ ಸಿಡಿಲು ಬಡಿದು ಪಂದ್ಯಾಟ ವೀಕ್ಷಿಸಲು ಬಂದಿದ್ದ ಪೊಲೀಸ್ ಸಿಬ್ಬಂದಿ ಸಿದ್ದಪಾಜಿ ಗಂಭೀರ ಗಾಯಗೊಂಡಿದ್ದಾರೆ. ಸಿಡಿಲಿನ ಹೊಡೆತಕ್ಕೆ ದೊಡ್ಡ ಸ್ಕ್ರೀನ್‌ಗೂ ಹಾನಿಯಾಗಿದೆ.

Comments are closed.