ಕರಾವಳಿ

ರಜೆಯ ಮಜಾ ಆಯ್ತು…ಶಾಲೆಗೆ ಬಂದ್ರು ಮಕ್ಕಳು!

Pinterest LinkedIn Tumblr

ಕುಂದಾಪುರ: ರಜೆಯ ಮಜಾ ಸವಿದಾಯಿತು. ಇನ್ನು ಬ್ಯಾಗ್ ಹಾಕಿಕೊಂಡು ಶಾಲೆಯತ್ತ ಹೆಜ್ಜೆಹಾಕಬೇಕಿದೆ ಪುಟಾಣಿ ಮಕ್ಕಳು. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆ ಸಿದ್ಧವಾಗಿದೆ. ತಾಲೂಕಿನ ಹಲವೆಡೆ ಸೋಮವಾರದಂದು ಶಾಲಾ ಪ್ರಾರಂಭೋತ್ಸವ ನಡೆಯಿತು.

ರಾಜ್ಯ ಬಂದ್ ಹಿನ್ನೆಲೆಯಲ್ಲಿ ಸೋಮವಾರ ಆರಂಭಗೊಂಡ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಿದ್ದರೂ, ಮಕ್ಕಳು, ಪೊಷಕರು ಹಾಗೂ ಶಿಕ್ಷಕರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಕೆಲವು ಕಡೆ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರೆ, ಮತ್ತೆ ಕೆಲವು ಕಡೆ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಸ್ವಾಗತಿಸಿ ಶಾಲೆಗೆ ಬರಮಾಡಿಕೊಂಡರು. ಜಾಥಾ ಮೂಲಕವೂ ವಿದ್ಯಾರ್ಥಿಗಳ ಬರಮಾಡಿಕೊಳ್ಳಲಾಯಿತು.
ಕುಂದಾಪುರ ತಾಲೂಕು ಮತದಾರರ ಪಟ್ಟಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದರೆ, ಪರೀಕ್ಷಾ ಫಲಿತಾಂಶದಲ್ಲೂ ಹುಡುಗಿಯರೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಆದರೆ ಶಾಲಾ ಹಾಜರಾತಿಯಲ್ಲಿ ಹುಡುಗರೇ ಸ್ಟ್ರಾಂಗೂ! ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ ಸೇರಿ ಒಟ್ಟು 27458 ವಿದ್ಯಾರ್ಥಿಗಳಿದ್ದರೆ, ಅದರಲ್ಲಿ ಹುಡುಗರು_14155, ಹುಡುಗಿಯರು-13303!

1 ರಿಂದ 10ನೇ ತರಗತಿ ಸರ್ಕಾರಿ ಶಾಲೆ ಒಟ್ಟು ಮಕ್ಕಳು 12571, ಬಾಲಕರು 6434, ಬಾಲಕಿಯರು 6137, ಅನುದಾನಿತ ಶಾಲೆ ಒಟ್ಟು ಮಕ್ಕಳು 3287, ಬಾಲಕರು 1667, ಬಾಲಕಿಯರು 1620, ಅನುದಾನ ರಹಿತ ಶಾಲೆ ಒಟ್ಟು ಮಕ್ಕಳು 11303, ಬಾಲಕರು 5896, ಬಾಲಕಿಯರು 5407, ಸೋಶಿಯಲ್ ವೆಲ್‌ಫೇರ್ ಒಟ್ಟು ವಿದ್ಯಾರ್ಥಿಗಳು 297, ಬಾಲಕರು 158, ಬಾಲಕಿಯರು 139.

ಕುಂದಾಪುರ ತಾಲೂಕಿನ ಎಲ್ಲಾ ಶಾಲೆಗಳಿಗೂ ಶೇ.೯೦ರಷ್ಟು ಪುಸ್ತಕ ಪೂರೈಕೆಯಾಗಿದ್ದು, ಎಲ್ಲಾ ಶಾಲೆಗೂ ಶೇ.೧೦೦ ಪುಸ್ತಕ ವಿತರಣೆ ಮಾಡಲಾಗಿದೆ. ಮೂರು ಮತ್ತು ಆರನೇ ತರಗತಿ ಒಂದೆರಡು ಪುಸ್ತಕ ಬಾಕಿಯಿದ್ದು, ಅದೂ ವಾರದಲ್ಲಿ ಪೂರೈಸಲಾಗುತ್ತದೆ. ಕೆಲ ಶಾಲೆಯಲ್ಲಿ ಮಕ್ಕಳಿಗೆ ಹೂಕಟ್ಟು ಬರಮಾಡಿಕೊಂಡರೆ, ಮತ್ತೆ ಕೆಲ ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಸ್ವಾಗತಿಸಿದರು. ಶಾಲೆಯಲ್ಲಿ ಬಿಸಿ ಊಟದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು, ಮಕ್ಕಳಿಗೆ ಕೆಲ ಕಡೆ ಪಾಯಸ, ಹಾಗೂ ಸ್ವೀಟ್ ವಿತರಿಸಲಾಯಿತು. ವಿದ್ಯುತ್ ಇಲ್ಲದ ಶಾಲೆಯಲ್ಲಿ ನೀರೆತ್ತಿ ಅಡುಗೆ ಮಾಡಲಾಯಿತು. ಶಾಲಾ ಆರಂಭೋ ತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಂದ್ ನಡುವೆಯೂ ಉತ್ತಮ ಹಾಜರತಿ ಶಾಲೆಯಲ್ಲಿ ಇತ್ತು. ಶಾಲಾ ಆರಂಭದ ಸಿದ್ದತೆ ಪೂರ್ವಭಾವಿಯಾಗಿ ಮಾಡಿಕೊಂಡಿದ್ದರಿಂದ ಎಲ್ಲೂ ಸಮಸ್ಯೆ ಆಗಲಿಲ್ಲ.
– ಅಶೋಕ್ ಕಾಮತ್ (ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ).

Comments are closed.