ಕರಾವಳಿ

ಕುಂದಾಪುರದಲ್ಲಿ ಸಿಡಿಲಬ್ಬರ: ಹಸು ಸಾವು; ಮನೆಗೆ ಹಾನಿ, ಲಕ್ಷಾಂತರ ನಷ್ಟ

Pinterest LinkedIn Tumblr

ಕುಂದಾಪುರ: ಇಲ್ಲಿಗೆ ಸಮೀಪದ ಆಲೂರಿನ ಸಸಿಹಿತ್ಲು ಎಂಬಲ್ಲಿನ ಸುಬ್ಬಿ ಪೂಜಾರ್ತಿ ಎನ್ನುವವರ ಮನೆಗೆ ಮಂಗಳವಾರ ಸಂಜೆ ಸುಮಾರು 4.15 ರ ವೇಳೆಯಲ್ಲಿ ಸುರಿದ ಮಳೆಯೊಂದಿಗೆ ಅಪ್ಪಳಿಸಿದ ಸಿಡಿಲಿನ ಆಘಾತಕ್ಕೆ ಮನೆಯ ಕೊಟ್ಟಿಗೆಯಲ್ಲಿ ಇದ್ದ ಉಳುಮೆಯ ಎತ್ತು ಮೃತ ಪಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಕುರಿತು ವರದಿಯಾಗಿದೆ.

ಸಿಡಿಲು ಬಡಿಯುವ ವೇಳೆಯಲ್ಲಿ ಮನೆಯಲ್ಲಿ ಕ್ಯಾನ್ಸ್‌ರ್ ಪೀಡಿತೆ ಸುಬ್ಬಿ ಪೂಜಾರ್ತಿ ಹಾಗೂ ಅವರ ಮೊಮ್ಮಗಳು ಅಶ್ವಿನಿ ಮಾತ್ರ ಇದ್ದರು. ಮಿಲ್ಲಿನಿಂದ ಅಕ್ಕಿಯನ್ನು ತರಲೆಂದು ಅಶ್ವಿನಿ ಅವರ ತಂದೆ–ತಾಯಿ ಮನೆಯಿಂದ ಹೊರಗೆ ಇದ್ದ ಕಾರಣದಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಹಿತ್ತಲಿನಲ್ಲಿ ಇದ್ದ ಬೆಲೆ ಬಾಳುವ ತೆಂಗು ಹಾಗೂ ಅಡಿಕೆಯ ಮರಗಳು ಸಿಡಿಲಿನ ಆಘಾತಕ್ಕೆ ಹಾನಿಗೊಳಗಾಗಿದೆ. ಮನೆಯ ಮಾಡಿನ ಹಂಚುಗಳು ಹಾರಿ ಹೋಗಿದೆ. ಮನೆಯ ವಿದ್ಯುತ್‌ ಸಂಪರ್ಕಗಳು ಸುಟ್ಟು ಹೋಗಿದೆ. ಪಾತ್ರೆ ಪಗಡಿಗಳು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ವಿದ್ಯುತ್‌ ಸಂಪರ್ಕದ ಬೋರ್ಡ್‌ಗಳು ಸುಟ್ಟು ಗೋಡೆಯಿಂದ ಕೆಳಕ್ಕೆ ಬಿದ್ದಿದೆ. ಅಂಗಳದಲ್ಲಿ ಇರುವ ಬಾವಿಯ ಕಂಬಗಳು ಸಿಡಿಲಿನ ಅಘಾತಕ್ಕೆ ಹಾನಿಗೊಳಗಾಗಿದೆ. ಕೊಟ್ಟಿಗೆಗೂ ಸಾಕಷ್ಟು ಹಾನಿಯುಂಟಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟು ಹಾಕಲಾಗಿದ್ದ ಉಳುಮೆಯ ಎತ್ತು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪಂಚಾಯತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲಿನ ಆಘಾತಕ್ಕೆ ತತ್ತರಿಸಿದ ಕುಟುಂಬಕ್ಕೆ ಸಹಾಯ ಮಾಡಲು ಸ್ಥಳೀಯರು ಧಾವಿಸಿದ್ದಾರೆ.

Comments are closed.