ಕರಾವಳಿ

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ನೀರಿನ ಬಿಲ್ ಬಗ್ಗೆ ತಕ್ಷಣ ಕ್ರಮ : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಅವೈಜ್ಞಾನಿಕವಾಗಿದ್ದು ಆ ಬಗ್ಗೆ ತಮಗೆ ಬಂದಿರುವ ದೂರುಗಳನ್ನು ಪರಿಶೀಲಿಸಿ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಮನಪಾ ಕಡೆಯಿಂದ ಮಂಗಳೂರಿನ ಮನೆಮನೆಗಳಿಗೆ ಕೊಡುವ ನೀರಿನ ಬಿಲ್ ಅವೈಜ್ಞಾನಿಕವಾಗಿವೆ ಎನ್ನುವ ದೂರುಗಳು ಬಂದಿವೆ. ಅನೇಕ ಮನೆಯವರು ತಮಗೆ ಹಿಂದೆ ಬರುತ್ತಿದ್ದ ಬಿಲ್ ಗಳನ್ನು ಮತ್ತು ಈಗ ಬಂದಿರುವ ಬಿಲ್ ತೋರಿಸಿದ್ದಾರೆ. ಎರಡಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಇದು ಕೇವಲ ಒಂದೆರಡು ಮನೆಗಳ ಸಮಸ್ಯೆಯಲ್ಲ. ಅನೇಕ ಮನೆಯವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ತಾವು ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಂಡಿದ್ದಾಗಿ ಹೇಳಿದ ಶಾಸಕರು ಈ ಕುರಿತು ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಇಂತಹ ಸಮಸ್ಯೆ ಮುಂದುವರೆಯಬಾರದು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಪಾಲಿಕೆಯ ಆಯುಕ್ತರು, ನೀರಿನ ವಿಭಾಗದ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಮಗೆ ತಿಳಿಸಿರುವುದಾಗಿ ವೇದವ್ಯಾಸ ಕಾಮತ್ ಹೇಳಿದರು.

ಮನಪಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಅನ್ನು ಮೀಟರ್ ರೀಡಿಂಗ್ ಮಾಡಿ ಗ್ರಾಹಕರಿಗೆ ನೀಡುವ ವ್ಯವಸ್ಥೆಯ ಗುತ್ತಿಗೆಯನ್ನು ಖಾಸಗಿ ಸಂಸ್ಥೆಯವರಿಗೆ ಹಿಂದೆ ನೀಡಲಾಗಿತ್ತು. ಆದರೆ ಬಿಲ್ ನಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದವು. ಒಂದು ಕಡೆ ನೀರಿನ ದರದ ಬಗ್ಗೆ ಜನರ ಆಕ್ಷೇಪ ಇದ್ದರೆ ಮತ್ತೊಂದೆಡೆ ಬಿಲ್ ಅವೈಜ್ಞಾನಿಕವಾಗಿರುವುದರ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದಂತಹ ಘಟನೆಗಳು ನಡೆದಿವೆ. ಕೆಲವು ಮನೆಗಳಿಗೆ ನೀರಿನ ಬಿಲ್ ಹದಿನೈದು ಸಾವಿರ, ಇಪ್ಪತ್ತು ಸಾವಿರ ಬಂದಾಗ ಜನ ನಿಬ್ಬೆರಗಾಗಿರುವುದು ನಡೆದಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.

Comments are closed.