ಮಂಗಳೂರು : ಜೋಗಿ ಸಮಾಜದ ಹಿರಿಯರು ವಿದ್ಯೆ, ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆರಲು ಬಯಸುವ ತಮ್ಮ ಸಮುದಾಯದ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅವರು ಕರ್ನಾಟಕ ರಾಜ್ಯ ಜೋಗಿ ಸಮಾಜ ಸುಧಾರಕ ಸಂಘದವರು ಭಾನುವಾರ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಕಲಿಯುವ ಮನಸ್ಸುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಜೋಗಿ ಸಮಾಜ ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೆಗೆ ಪಾತ್ರವಾಗಿದೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ನಾವೆಲ್ಲರೂ ಸಮಾಜ ಕಟ್ಟುವಂತಹ ದೃಷ್ಟಿಕೋನವನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಅಸಾಧ್ಯ ಯಾವುದೂ ಇಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಮಾಜಿ ಅಧ್ಯಕ್ಷ, ಹಾಲಿ ಖಜಾಂಚಿ ಎಚ್ ಕೆ ಪುರುಷೋತ್ತಮ ಮಾತನಾಡಿ ಭವಿಷ್ಯದಲ್ಲಿ ಯುವಘಟಕದ ಸ್ಥಾಪನೆ ಮಾಡುವ ಮೂಲಕ ಜೋಗಿ ಸಮಾಜದ ಯುವಕ, ಯುವತಿಯರ ಬೆಳವಣಿಗೆಗೆ ಕೆಲಸ ಮಾಡುವ ಗುರಿ ಇದೆ ಎಂದರು. ಬಡವರಿಗೆ ಮನೆ ಕಟ್ಟುವ ಗುರಿ ಈಗಾಗಲೇ ಪ್ರಗತಿಯಲ್ಲಿದೆ ಎಂದರು.
ಮಂಗಳೂರು ಉತ್ತರ ವಿಧಾನ ಸಭಾ (ಸುರತ್ಕಲ್ ) ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಜಿಲ್ಲಾ ಅಧ್ಯಕ್ಷ ಕಿರಣ್ ಜೋಗಿ ಮುಂತಾದವರು ಉಪಸ್ಥಿತರಿದ್ದರು.
Comments are closed.