ಕರಾವಳಿ

ಪ್ರೀತಿಸಿದವಳಿಂದಲೇ ಲೈಂಗಿಕ ದೌರ್ಜನ್ಯ ದೂರು: ಸತ್ತ ಯುವಕನ ಮನೆಯ ಗೋಳು ಕೇಳೋರ್‍ಯಾರು?

Pinterest LinkedIn Tumblr

ಉಡುಪಿ: ದಣಿಯಿಲ್ಲದೇ ಅನಾಥವಾಗಿರೋ ರಿಕ್ಷಾ…..ತಾನೇ ಚಲಾಯಿಸುತ್ತಿದ್ದ ದೋಣಿಯೂ ದಡದಲ್ಲಿ ಒಂಟಿಯಾಗಿದೆ. ಮನೆಯಂತೂ ಸ್ಮಶಾನಮೌನವಾಗಿದೆ. ಮನೆಮಂದಿ ಕಣ್ಣಲ್ಲಿ ಸದ್ಯ ಉಳಿದಿರೋದು ಕಣ್ಣೀರುಮಾತ್ರ. ಅಷ್ಟಕ್ಕೂ ಇಲ್ಲಿ ಅಂತದ್ದೇನಾಯ್ತು. ಈ ಮನೆಯ ಈ ಕಣ್ಣೀರ ಕಥೆಗೆ ಕಾರಣವೇನು? ಇದಕ್ಕೆ ಕಾರಣವಾದವರ್‍ಯಾರು ಅಂತೀರಾ? ಈ ಸ್ಟೋರಿ ನೋಡಿ.

(ಸಂತೋಷ್ ಕುಂದರ್ ಹಾಗೂ ಆತ ಪ್ರೀತಿಸಿದ ಯುವತಿ)

ಪ್ರೀತಿ ಮಾಯೆ ಹುಷಾರು..ಎಂಬ ಮಾತಿದೆ. ಆದರೇ ಆ ಯುವಕ ಮಾತ್ರ ಪ್ರೀತಿಗೆ ಬಿದ್ದಿದ್ದ. ಮನೆಯವರು, ಸ್ನೇಹಿತರು ಅದೆಷ್ಟೇ ಹೇಳಿದ್ರು ಆಕೆನೆ ನನಗೆ ಸರ್ವಸ್ವ ಅಂತಿದ್ದ. ಹೀಗೆ ಒಂದೆರಡು ವರ್ಷಗಳೇ ಕಳೆದು ಹೋಗಿತ್ತು. ಆದರೇ ಅದೆ ಪ್ರೀತಿ ಇಂದು ಆ ಯುವಕನನ್ನು ಬಲಿ ಪಡೆದಿದೆ. ಮನೆಮಂದಿಯನ್ನು ಅನಾಥರನ್ನಾಗಿಸಿದೆ. ಇದೆಲ್ಲಾ ನಡೆದಿರೋದು ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಕೋಡಿ ಕನ್ಯಾಣ ಎಂಬಲ್ಲಿ. ಸುಮಾರು 27 ವರ್ಷ ಪ್ರಾಯದ ಸಂತೋಷ್ ಕುಂದರ್ ಎಂಬಾತ ಪ್ರೀತಿಸಿದವಳ ಸುಳ್ಳು ದೂರಿಗೆ ಬಲಿಯಾದ ಯುವಕ. ಇಲ್ಲಿನ ನಿವಾಸಿಗಳಾದ ಗೋವಿಂದ ಸುವರ್ಣ ಪಾರ್ವತಿ ಕುಂದರ್ ದಂಪತಿಗಳ ಪುತ್ರ ಸಂತೋಷ್ ಶ್ರಮಜೀವಿ. ರಿಕ್ಷಾ ಚಾಲನೆ ಜೊತೆ ಬಿಡುವಿನ ವೇಳೆಯಲ್ಲಿ ತನ್ನದೇ ಸ್ವಂತ ದೋಣಿ ತೆಗೆದುಕೊಂಡು ಮೀನುಗಾರಿಕೆ ಕೂಡ ಮಾಡ್ತಿದ್ದ. ತಂದೆ ತಾಯಿ ಹಾಗೂ ಸೇರಿದಂತೆ ಇಡೀ ಮನೆಗೆ ಆಧಾರಸ್ತಂಭವೂ ಆಗಿದ್ದ.

(ಸಂತೋಷ್ ಮನೆ )

(ಸಂತೋಷ್ ತಂದೆ-ತಾಯಿ)

(ಸಂತೋಷ್ ಬರೆದಿಟ್ಟ ಡೆತ್ ನೋಟ್)

(ಆತ್ಮಹತ್ಯೆಗೆ ಶರಣಾದ ಸಂತೋಷ್ ಶವ)

( ಸಂತೋಷ್ ಅವರ ಆಟೋ ಹಾಗೂ ದೋಣಿ)

ಅದ್ಯೆಗೋ ಎರಡು ವರ್ಷದ ಹಿಂದೆ ಮನೆಗೆ ಸಮೀಪದ ಯುವತಿ ಜೊತೆ ಈತನಿಗೆ ಪ್ರೇಮಾಂಕುರವಾಗುತ್ತೆ. ಈತನ ಸ್ನೇಹಿತರು ಹಾಗೂ ಮನೆಮಂದಿ ಪ್ರೀತಿಗೆ ಆರಂಭದಲ್ಲೇ ತಡೆಯೊಡ್ಡಿದರೂ ಕೂಡ ಆಕೆ ಮಾತ್ರ ಈತನಿಗೆ ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದಳು. ಕೊನೆಕೊನೆಗೂ ಮನೆಯವರು ಈತನಿಗೆ ಏನು ಹೇಳುತ್ತಿರಲಿಲ್ಲ. ಇಬ್ಬರ ಲವ್ವಿಡವ್ವಿ ಹೀಗೆಯೇ ಸಾಗಿತ್ತು. ಆದರೇ ಹಠಾತ್ ಆಕೆ ಒಂದು ತಿಂಗಳ ಹಿಂದೆ ಕೋಟ ಪೊಲೀಸ್ ಠಾಣೆಯಲ್ಲಿ ತನಗೆ ಸಂತೋಷ್ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಿ ಕೇಸನ್ನು ನೀಡುತ್ತಾಳೆ. ಇದಕ್ಕೆ ಹ್ಯೂಮನ್ ರೈಟ್ಸ್ ಸಂಸ್ಥೆಯ್ಂದು ಆಕೆ ಬೆನ್ನಿಗೆ ನಿಲ್ಲುತ್ತೆ. ತಪ್ಪು ಮಾಡದೇ ಶಿಕ್ಷೆ ಅನುಭವಿಸಬೇಕಾಯ್ತೆಂಬ ಬೇಸರದಲ್ಲಿ ಸಂತೋಷ್ ಕಣ್ಮರೆಯಾಗುತ್ತಾನೆ. ಬಳಿಕ ಆತ ಬರೋಬ್ಬರಿ ಒಂದು ತಿಂಗಳ ಮೇಲೆ ಮರಳಿ ಮನೆಗೆ ಬಂದಿದ್ದು ಹೆಣವಾಗಿ. ಕೇಸಿನ ಬಳಿಕ ಊರು ಬಿಟ್ಟ ಆತ ಚಿಕ್ಕಮಗಳುರು ಜಿಲ್ಲೆಯ ಬಿರೂರು ಸೇರಿದ್ದ. ಅಲ್ಲಿನ ಬಿ. ದಾಸರಹಟ್ಟಿ ಎಂಬಲ್ಲಿನ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ. ಆದರೇ ಅದೇನಾಯ್ತೋ ಗೊತ್ತಿಲ್ಲ. ಮೇ.2ರಂದು ಶನಿವಾರ ಮಧ್ಯಾಹ್ನ ಮನೆಯೆದುರಿನ ಕೊಟ್ಟಿಗೆಯಲ್ಲಿ ನೇಣಿಗೆ ಕೊರಳೊಡ್ಡಿಬಿಟ್ಟಿದ್ದ.

(ನ್ಯಾಯಕ್ಕಾಗಿ ಕೋಟ ಪೊಲೀಸ್ ಠಾಣೆ & ಯುವತಿ ಮನೆಯೆದುರು ಊರವರ ಪ್ರತಿಭಟನೆ)

ಅಂದ ಹಾಗೆ ಸಂತೋಷ್ ಆತ್ಮಹತ್ಯೆ ಮೊದಲು ‘ತನ್ನ ಸಾವಿಗೆ ಪ್ರೀತಿಸಿದ ಯುವತಿ ಹಾಗೂ ಆಕೆಯ ಮನೆಯವರು ಕಾರಣ. ಆಕೆ ತನಗೆ 3 ಲಕ್ಷ ಹಣ ಕೊಡಬೇಕಿದೆ’ ಎಂದು ಡೇತ್ ನೋಟ್ ಬರೆದಿಟ್ಟಿದ್ದ. ಮನೆಮಂದಿಗೆ ವಿಷ್ಯಾ ತಿಳಿಯುತ್ತಲೇ ಬಿರೂರಿಗೆ ತೆರಳಿ ಅಲ್ಲಿ ಕಾನೂನು ಪ್ರಕ್ರೊಯೆ ಮುಗಿಸಿ ಶವವನ್ನು ಹುಟ್ಟುರಿಗೆ ತರುತ್ತಾರೆ. ಆದರೆ ಇಲ್ಲಿ ಸ್ಥಳೀಯರು ರೊಚ್ಚಿಗೆದ್ದಿದ್ರು. ಸನ್ನಡತೆಯ ಯುವಕನ ಸಾವಿಗೆ ಕಾರಣರಾದ ಯುವತಿ ಹಾಗೂ ಆಕೆ ಮನೆಯವರ ವಿರುದ್ಧ ಗರಂ ಆದ ಊರಿನ ಮಂದಿ ಆಕೆ ಮನೆಯೆದುರು ಶವ ಇಟ್ಟು ಪ್ರತಿಭಟಿಸಿದ್ರು ಮಾತ್ರವಲ್ಲ ಮಾರನೇ ದಿನ ಅಂದ್ರೆ ಸೋಮವಾರ ಕೋಟ ಪೊಲೀಸ್ ಠಾಣೆ ಎದ್ರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ರು. ಸದ್ಯ ಮನೆಗೆ ಆಧಾರವಾಗಿದ್ದ ಸಂತೋಷನನ್ನು ಕಳೆದುಕೊಂಡ ಮನೆಮಂದಿ ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ. ಮಗನ ಅಗಲುವಿಕೆಯಿಂದಾಗಿ ಆ ಮುಗ್ಧ ಜೀವಗಳು ಕಣ್ಣಾಲಿಗಳು ತುಂಬಿದ್ದು ನೋವು ಮಡುಗಟ್ಟಿದೆ.

ಒಟ್ಟಿನಲ್ಲಿ ಮನೆಮಗನ ಕಳೆದುಕೊಂಡ ಕುಟುಂಬವೀಗ ನೋವಿನಲ್ಲಿದೆ. ಡೇತ್ ನೋಟಿನಲ್ಲಿ ಹೆಸರಿಸಿದ ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಶೀಘ್ರ ಅವರನ್ನು ಪತ್ತೆಹಚ್ಚಬೇಕಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸಂತೋಷ್ ಸಾವಿಗೆ ನ್ಯಾಯ ಒದಗಿಸಬೇಕಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.