ಕರಾವಳಿ

ಶಾಸಕ ವೇದವ್ಯಾಸ ಕಾಮತ್ ಅವರ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ನಿರೀಕ್ಷೆಗೆ ಮೀರಿ ಜನಸ್ಪಂದನೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಕಚೇರಿಯಲ್ಲಿ ನಿತ್ಯ ಬೆಳಿಗ್ಗೆ ನಡೆಯುವ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ನಿರೀಕ್ಷೆಗೆ ಮಿಗಿಲಾಗಿ ಜನಸ್ಪಂದನೆ ವ್ಯಕ್ತವಾಗುತ್ತಿದ್ದು, ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಕಚೇರಿ “ಅಟಲ್ ಸೇವಾ ಕೇಂದ್ರ”ದಲ್ಲಿ ಶಾಸಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ನಿತ್ಯ ನೂರಾರು ಜನ ಆಗಮಿಸುತ್ತಿರುತ್ತಾರೆ.

ಬೆಳಿಗ್ಗೆ 8 ಗಂಟೆಯಿಂದ ತಮ್ಮ ಕಚೇರಿಯಲ್ಲಿ ಲಭ್ಯರಿರುವ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮನ್ನು ಭೇಟಿಯಾಗಲು ಬರುವ ನಾಗರಿಕರೊಂದಿಗೆ ವೈಯಕ್ತಿಕವಾಗಿ ಸ್ಪಂದಿಸುತ್ತಾರೆ. ಜನರು ಲಿಖಿತವಾಗಿ ಕೊಡುವ ಮನವಿಯನ್ನು ಸವಿವರವಾಗಿ ಓದುವ ಶಾಸಕರು ಅದನ್ನು ಯಾವ ರೀತಿಯಲ್ಲಿ ಪರಿಹರಿಸಬಹುದು ಎಂದು ತೀರ್ಮಾನಿಸಿ ತಕ್ಷಣ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ.

ಗುರುವಾರ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದ ಯುವಕನೊಬ್ಬ ತನ್ನ ಪೋಷಕ ರೊಂದಿಗೆ ಬಂದು ಉದ್ಯೋಗ ಕೊಡಿಸಲು ಮನವಿ ಮಾಡಿದಾಗ ವೇದವ್ಯಾಸ ಕಾಮತ್ ಅವರು ಸ್ಥಳದಲ್ಲಿಯೇ ಆತನಿಗೆ ಒಳ್ಳೆಯ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಿದರು.

ಅದರಿಂದ ಸಂತೃಪ್ತಗೊಂಡ ಯುವಕ ಶಾಸಕರಿಗೆ ಕೃತಜ್ಞತೆ ಸೂಚಿಸಿ ಪೋಷಕರೊಂದಿಗೆ ತೆರಳಿದ್ದಾನೆ. ಎರಡು ಬಡಕುಟುಂಬಗಳು ಆರ್ಥಿಕ ಸಂಕಟದಿಂದ ಆಸ್ಪತ್ರೆಯ ಬಿಲ್ ಕಟ್ಟಲು ಸಾಧ್ಯವಾಗದೇ ಶಾಸಕರಿಗೆ ಮನವಿ ಮಾಡಿದಾಗ ಆಸ್ಪತ್ರೆಗಳ ಮುಖ್ಯಸ್ಥರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಕರೆ ಮಾಡಿ ಮಾತನಾಡಿದ್ದಾರೆ.

ಬಿಜೈ ವಾರ್ಡಿನ ಮಹಿಳೆಯೊಬ್ಬರು ನೀರಿನ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ತಕ್ಷಣ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಸಂಪರ್ಕಿಸಿ ಶಾಸಕರು ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿದ ವೇದವ್ಯಾಸ ಕಾಮತ್ ಅವರು, ಜನರು ಅಧಿಕಾರದೊಂದಿಗೆ ಹೊಸ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುವ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ. ಹಿಂದೆ ವೈಯಕ್ತಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಈಗ ಶಾಸಕನ ನೆಲೆಯಲ್ಲಿ ಹೆಚ್ಚು ಸೇವೆ ಸಲ್ಲಿಸಲು ಜನ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಶಾಸಕ ಡಿ ವೇದವ್ಯಾಸ ಕಾಮತ್ ಅವರು ಮಂಗಳೂರಿನಲ್ಲಿ ಇರುವಾಗ ಪ್ರತಿನಿತ್ಯ ಅಹವಾಲು ಸ್ವೀಕಾರ ಕಾರ್ಯಕ್ರಮ ಇರುತ್ತದೆ ಎಂದು ಶಾಸಕರ ಕಚೇರಿಯ ಮೂಲಗಳು ತಿಳಿಸಿವೆ. ಗುರುವಾರ ಲೇಡಿಗೋಶನ್ ಆಸ್ಪತ್ರೆಯ ಮುಖ್ಯಸ್ಥರು, ಎಂಆರ್ ಪಿಎಲ್ ಸಂಸ್ಥೆಯ ಪ್ರಮುಖರು, ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖರು ಶಾಸಕರನ್ನು ಅವರ ಕಚೇರಿಯಲ್ಲಿ ಅಭಿನಂದಿಸಿದರು .

Comments are closed.