ಕರಾವಳಿ

ಕಿರುಸೇತುವೆ ದ್ವಂಸ ಪ್ರಕರಣ: ಮಾಜಿ ನಕ್ಸಲ್ ಮುಖಂಡ ನೀಲಗುಳಿ ಪದ್ಮನಾಭ ವಶಕ್ಕೆ; ನ್ಯಾಯಾಂಗ ಬಂಧನ

Pinterest LinkedIn Tumblr

ಕುಂದಾಪುರ : ತಾಲ್ಲೂಕಿನ ಅಮಾಸೆಬೈಲು ಹಾಗೂ ಶಂಕರನಾರಾಯಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2004 ಹಾಗೂ 2010 ರಲ್ಲಿ ನಡೆದಿದ್ದ 4 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಹೊರಡಿಸಿದ್ದ ಬಂಧನದ ವಾರಂಟ್‌ ಅಡಿಯಲ್ಲಿ ಅಮಾಸೆಬೈಲ್ ಪೊಲೀಸರು ಮಾಜಿ ನಕ್ಸ್‌ಲ್‌ ಮುಖಂಡ ನಿಲಗುಳಿ ಪದ್ಮನಾಭ್‌ ಅವರನ್ನು ಗುರುವಾರ ಉಡುಪಿಯಲ್ಲಿ ಬಂಧಿಸಿ ಕುಂದಾಪುರದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಮಾವೋವಾದಿ ನಕ್ಸ್‌ಲ್‌ ಚಟುವಟಿಕೆಯ ವಿವಿಧ ಪ್ರಕರಣಗಳ ಸಂದರ್ಭಗಳಲ್ಲಿ ನಿಲಗುಳಿ ಪದ್ಮನಾಭ ಅವರ ಹೆಸರು ಪ್ರಾಸ್ತಾಪವಾಗುತ್ತಿತ್ತು. ಮೂಲತ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ನಿಲಗುಳಿ ನಿವಾಸಿಯಾಗಿದ್ದ ಅವರು ಪತ್ರಕರ್ತೆ ದಿ.ಗೌರಿ ಲಂಕೇಶ ಅವರ ಪ್ರಯತ್ನದಿಂದಾಗಿ 2016 ರಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತರಾಗಿ ಮುಖ್ಯವಾಹಿನಿಗೆ ಬಂದಿದ್ದರು. ಗುರುವಾರ ಉಡುಪಿಗೆ ಬರುವ ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಕುಂದಾಪುರದ ನ್ಯಾಯಾಲಯದಲ್ಲಿ ಹಾಜರಾಗಿದ್ದ ಸಂದರ್ಭದಲ್ಲಿ ಅವರು ನ್ಯಾಯಾಧೀಶರಲ್ಲಿ ತಮಗೆ ಜಾಮೀನು ನೀಡುವಂತೆ ಲಿಖಿತ ಮನವಿ ಸಲ್ಲಿಸಿದ್ದಾರೆ. 2016 ರಲ್ಲಿ ನಕ್ಸ್‌ಲ್‌ ಪ್ಯಾಕೇಜ್‌ ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಶರಣಾಗತಿಯಾದ ಬಳಿಕ 10 ತಿಂಗಳುಗಳ ಕಾಲ ಜೈಲಿನಲ್ಲಿ ಬಂಧನದಲ್ಲಿ ಇದ್ದ ವೇಳೆ ಶೃಂಗೇರಿ, ಕೊಪ್ಪ, ಶಿವಮೊಗ್ಗ ಹಾಗೂ ಕಾರ್ಕಳ ನ್ಯಾಯಾಲದಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 15 ವಾರಂಟ್‌ಗಳು ಬಂದಿದ್ದು, ಈ ವಾರಂಟ್‌ಗಳಿಗೆ ಸಂಬಂಧಿಸಿದ ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಂಡು ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪಗಳಿಗೆ ತಪ್ಪದೆ ಹಾಜರಾಗುತ್ತಿದ್ದೇನೆ. ಆದರೆ ಕುಂದಾಪುರ ತಾಲ್ಲೂಕಿನ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ ಎನ್ನುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಗೆ ಯಾವುದೆ ರೀತಿಯ ಮಾಹಿತಿ ಇಲ್ಲದೆ ಇರುವುದರಿಂದ ತನಗೆ ಜಾಮೀನು ಪಡೆದುಕೊಳ್ಳಲು ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಂಠ ಹೆಬ್ಬಾರ್‌ ಅವರು ನಿಲಗುಳಿ ಪದ್ಮನಾಭ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Comments are closed.