ಕರಾವಳಿ

ಮುಸ್ಲಿಂ ಸಮುದಾಯ ಯಾರ ಜೇಬಿನಲ್ಲಿ ಇಲ್ಲ: ತನ್ವೀರ್‌ ಸೇಠ್‌ಗೆ ಖಾದರ್ ತಿರುಗೇಟು

Pinterest LinkedIn Tumblr


ಉಡುಪಿ: ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿ ಇಲ್ಲ. ನಾಲಾಯಕ್ ಯಾರೆಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಅವರು ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತಲೆದೋರಿದ ಸ್ಥಳ ಪರಿಶೀಲನೆಗೆ ಸಚಿವ ಆರ್.ವಿ. ದೇಶಪಾಂಡೆ ಅವರೊಂದಿಗೆ ಆಗಮಿಸಿ, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.

ಸೇಠ್ ಹೇಳಿಕೆಯನ್ನು ನಾನು ಕೇಳಿಲ್ಲ. ನಿಮ್ಮಿಂದ ತಿಳಿದಿದ್ದೇನೆ. ನಾನು ಶಾಸಕನಾಗಿ, ಮಂತ್ರಿಯಾಗಿ ಈ ಹಿಂದಿನ ಸರಕಾರ ನೀಡಿದ 2 ಖಾತೆಯನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನಿಭಾಯಿಸಿದ್ದೇನೆ. ಮಂತ್ರಿಯಾಗಿ ಒಂದು ಸಮುದಾಯ ನೋಡದೇ ರಾಜ್ಯದ ಆರೂವರೆ ಕೋಟಿ ಜನರ ಸೇವೆ ಮಾಡಿದ್ದೇನೆ. ನಾಲಾಯಕ್ ಯಾರೆಂದು ಜನ ತೀರ್ಮಾನ ಮಾಡುತ್ತಾರೆ ಎಂದರು.

ಸಮುದಾಯ ಯಾರೊಬ್ಬರ ಕಿಸೆಯಲ್ಲಿ ಇಲ್ಲ. ನಾನು ಯಾರಿಗೂ ಮಂತ್ರಿ ಸ್ಥಾನವನ್ನು ತಪ್ಪಿಸಿಲ್ಲ. ಯಾರ ಸಾಮಥ್ರ್ಯ ಎಷ್ಟು ಎಂಬುದನ್ನು ಹೈಕಮಾಂಡ್ ತಿಳಿದಿದೆ. ನನ್ನ ಕೆಲಸ , ಕಾರ್ಯಗಳು ಸರಿ ಇಲ್ಲ ಎನಿಸಿದರೆ ಸಲಹೆ ಪಡೆದು ಮುಂದೆ ಹೋಗುವೆ. ಸೇಠ್ ಅವರಿಗೆ ನನ್ನ ಮೇಲೆ ಪ್ರೀತಿ ಹೆಚ್ಚು. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ನಾವೆಲ್ಲ ಆತ್ಮೀಯತೆ, ಸಹೋದರತೆಯನ್ನು ಇಟ್ಟುಕೊಂಡಿದ್ದೇವೆ ಎಂದು ನಕ್ಕರು.

Comments are closed.