ಕರಾವಳಿ

ಕರಾವಳಿ ಕಾಲೇಜಿನಿಂದ ಕೋರ್ಟ್‌ಗೆ ಅರ್ಜಿ : ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ

Pinterest LinkedIn Tumblr

ಮಂಗಳೂರು, ಜೂನ್. 18: ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಮಂಗಳೂರಿನಲ್ಲಿ ಕೈಗೊಂಡಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ರಾಜಕಾಲುವೆ ಒತ್ತುವರಿ ತೆರವು ಮಾಡುವ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಕಾರ್ಯಾಚರಣೆಯ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಗರದ ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.

ಕೊಟ್ಟಾರದಲ್ಲಿ ಹಮ್ಮಿಕೊಂಡಿರುವ ರಾಜಕಾಲುವೆ ಒತ್ತುವರಿ ತೆರವು ಪ್ರಶ್ನಿಸಿ ಕರಾವಳಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗಣೇಶ್ ರಾವ್ ಅವರು ನಗರದ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದನ್ನು ಪ್ರಶ್ನಿಸಿ ಜಿಲ್ಲಾಡಳಿತವು ಸೋಮವಾರ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಮೇ 29ರಂದು ಮಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಕೃತಕ ನೆರೆ ಉಂಟಾಗಿ ಆಸ್ತಿ ಪಾಸ್ತಿ ನಷ್ಟ ಸಂಭವಿಸಿತ್ತು.

ನಗರದ ರಾಜಾಕಾಲುವೆಗಳು ಉಕ್ಕಿ ಹರಿದಿತ್ತು. ಇದಕ್ಕೆ ರಾಜಕಾಲುವೆಗಳ ಒತ್ತುವರಿಯಾಗಿರುವುದರಿಂದ ಕೃತಕ ಪ್ರವಾಹ ಉಂಟಾಗಿದೆ ಎಂದು ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಒತ್ತುವರಿಗಳನ್ನು ತೆರವುಗೊಳಿಸಲು ಮುಂದಾಗಿತ್ತು. ತೆರವು ಕಾರ್ಯಾಚರಣೆ ಸಂದರ್ಭ ಹೆದ್ದಾರಿ ಬದಿಯಲ್ಲಿರುವ ಕರಾವಳಿ ಕಾಲೇಜು ಬಳಿಯಲ್ಲೂ ಕಾರ್ಯಾಚರಣೆಗೆ ಮುಂದಾಗಿತ್ತು. ಕಾರ್ಯಾಚರಣೆ ನಡೆಸುವ ಮುನ್ನ ನೋಟಿಸ್ ನೀಡಿಲ್ಲ. ಆದ್ದರಿಂದ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಗಣೇಶ್ ರಾವ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

Comments are closed.