ಕರಾವಳಿ

ಬೈಕ್ ಅಪಘಾತ ಪಡಿಸಿ ಮರಣಕ್ಕೆ ಕಾರಣನಾದ ಆರೋಪಿಗೆ ಶಿಕ್ಷೆ ವಿಧಿಸಿದ ಕೋರ್ಟ್

Pinterest LinkedIn Tumblr

ಉಡುಪಿ: ಕಳೆದೆರಡು ವರ್ಷಗಳ ಹಿಂದೆ ಬೈಕ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು ಈ ಅಪಘಾತಕ್ಕೆ ಕಾರಣನಾದ ಓರ್ವ ಬೈಕ್ ಸವಾರನಿಗೆ ನ್ಯಾಯಾಲಯ ದಂಡ ಹಾಗೂ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.

19-02-2016 ರಂದು ಮಧ್ಯಾಹ್ನ ಕ್ಲೆಟನ್ ಶರೋನ್ ಎಂಬಾತ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಕಾರ್ಕಳ- ಪಡುಬಿದ್ರೆ ರಾಜ್ಯ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ತನ್ನ ಬೈಕನ್ನು ಚಲಾಯಿಸಿ, ನಂದಿಕೂರು ಗ್ರಾಮದ ಕಾರ್ಪೊರೆಷನ್ ಬ್ಯಾಂಕ್ ಬಳಿ ತನ್ನ ಮುಂದಿನಿಂದ ಕೃಷ್ಣಮಯ್ಯ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕಿಗೆ ಹಿಂದಿನಿಂದ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದು ಕೃಷ್ಣಮಯ್ಯ ಬೈಕ್ ಲಾರಿಗೆ ಡಿಕ್ಕಿ ಹೊಡೆದು ಬೈಕಿಗೆ ಬೆಂಕಿ ಹತ್ತಿ ಕೃಷ್ಣಮಯ್ಯ ಇವರು ತೀವ್ರತರದ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೇ ವೇಳೆ ಆರೋಪಿ ಚಾಲಕ ಹಾಗೂ ಸಹ ಸವಾರ ಕೂಡ ಸಾಧಾರಣ ಸ್ವರೂಪದ ಗಾಯಗೊಂಡಿರುತ್ತಾರೆ.

ಈ ಬಗ್ಗೆ ಕಾಪು ವೃತ್ತ ನಿರೀಕ್ಷಕರಾಗಿದ್ದ ಸುನೀಲ್ ವೈ.ನಾಯ್ಕ ಅವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಮಾನ್ಯ ಉಡುಪಿ 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶೋಭಾ ಇ. ರವರು ಆರೋಪಿಗಳಿಗೆ ಐಪಿಸಿ ಕಲಂ 279, 337, 304(ಎ) ರಡಿ 6 ತಿಂಗಳು ಶಿಕ್ಷೆ ಮತ್ತು ಒಟ್ಟು ರೂ.10,500/-ನ್ನು ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಯಂತಿ ಕೆ. ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.