ಸುರೇಂದ್ರ ಶೆಟ್ಟಿ ಬಂಟ್ವಾಳ
ಬಂಟ್ವಾಳ, ಜೂನ್. 21: ಜೂನ್ 11ರಂದು ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಸಮೀಪ ಕೊಳಿ ಅಂಗಡಿ ಮುಂಭಾಗದಲ್ಲಿ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಹಾಗೂ ಅತನ ಸಹಚರನನ್ನು ಪೊಲೀಸರು ಕಾಸರಗೋಡಿನ ಕುಂಬಳೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಪ್ರಮುಖ ಆರೋಪಿ ಬಂಟ್ವಾಳ ನಿವಾಸಿ ಸುರೇಂದ್ರ ಶೆಟ್ಟಿ ಹಾಗೂ ಅತನ ಸಹಚರ ಸತೀಶ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಜೂನ್ 11ರಂದು ಮಧ್ಯಾಹ್ನ ಸುಮಾರು 1ಗಂಟೆಯ ಸಮಯ ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಸಮೀಪ ಕೊಳಿ ಅಂಗಡಿ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸುರೇಂದ್ರ ಶೆಟ್ಟಿ ಬಂಟ್ವಾಳ ಹಾಗೂ ಅತನ ಸಹಚರರು ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ ನಡೆಸಿದ್ದರು.
ಬಡ್ಡಕಟ್ಟೆಯ ಹೋಟೆಲೊಂದರಲ್ಲಿ ಕುಳಿತ್ತಿದ್ದ ಬಿಜೆಪಿ ಕಾರ್ಯಾಕರ್ತರಾದ ಗಣೇಶ್, ಚರಣ್, ಪುಷ್ಪರಾಜ್ ಹಾಗೂ ಮತ್ತಿತ್ತರ ಮೇಲೆ ಸುರೇಂದ್ರ ಶೆಟ್ಟಿ ಬಂಟ್ವಾಳ ಹಾಗೂ ಅತನ ಸಹಚರರು ತಲವಾರು ದಾಳಿ ನಡೆಸಿದ್ದು, ದಾಳಿಯಲ್ಲಿ ಗಣೇಶ್ ಮತ್ತು ಪುಷ್ಪರಾಜ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿತ್ತು.
(ಘಟನೆ ನಡೆದ ದಿನದ ಚಿತ್ರ)
ತುಳುಚಿತ್ರವೊಂದರಲ್ಲಿ ನಟಿಸಿರುವ ಸುರೇಂದ್ರ ಶೆಟ್ಟಿ ಬಂಟ್ವಾಳ ಈ ಹಿಂದೆ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಬಳಿಕ ಕಾಂಗ್ರೆಸ್ ಸೇರಿರುವುದಾಗಿ ಹೇಳಲಾಗಿದೆ. ಘಟನೆಯ ಹಿಂದಿನ ದಿನ ಬಜಂಗದಳದ ಮುಖಂಡ ಭುವಿತ್ ಶೆಟ್ಟಿ ತಂಡ ಹಾಗೂ ಸುರೇಂದ್ರ ಶೆಟ್ಟಿ ತಂಡದ ಮಧ್ಯೆ ಘರ್ಷಣೆ ನಡೆದಿದ್ದು,ಈ ದ್ವೇಷದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ ಈ ತಲವಾರು ದಾಳಿ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ತಲವಾರುಗಳು ಪತ್ತೆಯಾಗಿತ್ತು.
ಬಡ್ಡಕಟ್ಟೆಯಲ್ಲಿ ನಡೆದ ತಲವಾರು ದಾಳಿ ಪ್ರಕರಣದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳು ಕುಂಬ್ಳೆಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಕುಂಬ್ಳೆಯಲ್ಲಿ ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜಾರು ಪಡಿಸಿರುವುದಾಗಿ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೀಪಕ್, ಪವನ್, ಶೈಲೇಶ್ ಹಾಗೂ ರಂಜೀತ್ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಾದ ತಿಲಕ್, ಮನೋಹರ್ ಹಾಗೂ ಪ್ರದೀಪ್ ಅವರ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.
Comments are closed.