ಕರಾವಳಿ

ಸರಕಾರಿ ಹಾಸ್ಟೆಲ್ ಮತ್ತು ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಪ್ರಥಮ ಆದ್ಯತೆ ನೀಡಲು ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ

Pinterest LinkedIn Tumblr

ಮಂಗಳೂರು : ಸರಕಾರಿ ಹಾಸ್ಟೆಲ್ ಮತ್ತು ಆಸ್ಪತ್ರೆಗಳಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳು ಶುಚಿತ್ವಕ್ಕೆ ಪ್ರಥಮ ಆದ್ಯತೆ ಕೊಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಅವರು ಆರೋಗ್ಯ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ವಿವಿಧ ಅಭಿವೃದ್ಧಿ ಕಾರ್‍ಯಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಲೇಡಿಗೋಶನ್ ಆಸ್ಪತ್ರೆಯಲ್ಲಿ ಜನರೇಟರ್ ಸಮರ್‍ಪಕವಾಗಿ ಕಾರ್‍ಯನಿರ್‍ವಹಿಸಲು ಅದಕ್ಕೆ ಸುರಕ್ಷಿತ ವ್ಯವಸ್ಥೆ ಮಾಡಬೇಕು. ವೆನ್ ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಮತ್ತು ಆಯುಷ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ರಿಪೇರಿ ಆಗಬೇಕಾಗಿರುವುದು ಮತ್ತು ಗುಣಮಟ್ಟ ಸುಧಾರಿಸಲು ಇನ್ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಕುರಿತು ಅವರು ಅಧಿಕಾರಿಗಳಿಂದ ವರದಿಯನ್ನು ಪಡೆದುಕೊಂಡರು.

ಅರ್‍ಬನ್ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಲು ಕ್ರಮಗೊಳ್ಳಬೇಕು ಎನ್ನುವುದರ ಕುರಿತು ಶಾಸಕರು ಮಾಹಿತಿ ಕೇಳಿದರು. ಸಾರ್‍ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸಮರ್‍ಪಕವಾಗಿ ತಿಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ವೇದವ್ಯಾಸ ಕಾಮತ್ ಸೂಚಿಸಿದರು.

ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶಾಲೆ, ಹಾಸ್ಟೆಲ್ ಗಳಲ್ಲಿ ಮೆರಿಟ್ ಮೇಲೆ ಪ್ರವೇಶಾತಿ ಮತ್ತು ಅರ್‍ಹರಿಗೆ ಸಿಗಬೇಕಾದ ಸೌಲಭ್ಯಗಳಲ್ಲಿ ಯಾವುದೇ ಸಮಸ್ಯೆಯಾಗಬಾರದು ಎಂದು ಶಾಸಕರು ಸೂಚಿಸಿದರು. ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳು ಸಮರ್‍ಪಕವಾಗಿ ಸಿಗುತ್ತಿಲ್ಲವಾದರೆ ಅದಕ್ಕೆ ಕಾರಣ ಮತ್ತು ಬೇಕಾದ ಅನುದಾನ ಸಹಿತ ಸಮಗ್ರ ವಿವರಗಳನ್ನು ಒಂದು ವಾರದೊಳಗೆ ತಮಗೆ ಸಲ್ಲಿಸಬೇಕು. ತಾವು ಇಲಾಖೆಯ ಸಚಿವರೊಂದಿಗೆ ಚರ್‍ಚಿಸಿ ಮಕ್ಕಳಿಗೆ ಆ ಎಲ್ಲಾ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಮಂಗಳೂರು ನಗರ ದಕ್ಷಿಣದಲ್ಲಿರುವ ಆರು ಹಾಸ್ಟೆಲ್ ಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಅಧಿವೇಶನ ಮುಗಿದ ಕೂಡಲೇ ಬರುವುದಾಗಿ ತಿಳಿಸಿದ ಶಾಸಕರು ಹಾಸ್ಟೆಲ್ ಗಳಿಗೆ ಬರುವ ಅನುದಾನದ ಕೊರತೆಯಿಂದ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯ ಕುಂಠಿತವಾಗುತ್ತಿದ್ದರೆ ವರದಿ ನೀಡಬೇಕು ಎಂದು ಸೂಚಿಸಿದರು.

ಇನ್ನು ಅರ್‍ಹ ಮಕ್ಕಳಿಗೆ ಬರುವ ವಿದ್ಯಾರ್‍ಥಿ ವೇತನ ನೇರವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಹೋಗುತ್ತಿರುವುದನ್ನು ಖಾತ್ರಿ ಮಾಡಬೇಕೆಂದು ಸೂಚಿಸಿದರು. ಹಾಸ್ಟೆಲ್ ಗಳ ಶೌಚಾಲಯ, ಆಹಾರ ತಯಾರಿಕೆ ಸಹಿತ ಪ್ರತಿಯೊಂದರಲ್ಲಿಯೂ ಶುಚಿತ್ವವನ್ನು ಆದ್ಯತೆಯನ್ನಾಗಿ ಪರಿಗಣಿಸಬೇಕು. ಹಾಸ್ಟೆಲ್ ನ ಯಾವ ವಿಭಾಗದಲ್ಲಿ ಯಾವ ದಿನ ಸ್ವಚ್ಚತೆಯ ಕಾರ್‍ಯ ಆಗಿದೆ ಎನ್ನುವುದರ ಮಾಹಿತಿ ಹಾಸ್ಟೆಲಿನ ಬೋರ್‍ಡ್ ಮೇಲೆ ಬರೆದು ಇಡಬೇಕು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ವಾರ್‍ಡನ್ ಮತ್ತು ಸಿಬ್ಬಂದಿಗಳ ಕೊರತೆ ಇರುವ ದೂರು ಬಂದಿದೆ. ಅದನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಚರ್‍ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಮಕ್ಕಳಿಗೆ ಪೌಷ್ಟಿಕಾಂಶ ಇರುವ ಆಹಾರಗಳನ್ನು ಪೂರೈಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ, ಅಲ್ಪಸಂಖ್ಯಾತ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.