ಮ0ಗಳೂರು ಜುಲೈ 3: ಮಂಗಳೂರು ಮಹಾನಗರಪಾಲಿಕೆಯು ನಗರದ ಭೂಗತ ಒಳಚರಂಡಿ ಯೋಜನೆಯ ದೈನಂದಿನ ನಿರ್ವಹಣೆಯನ್ನು ನಿರ್ವಹಿಸುತ್ತಿದೆ. ನಗರದಾದ್ಯಂತ ಹಮ್ಮಿ ಕೊಂಡಿರುವ ಒಳಚರಂಡಿ ವ್ಯವಸ್ಥೆಗೆ ವಸತಿ ಸಂಪರ್ಕವನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಒಳಚರಂಡಿ ಬಳಕೆದಾರರು ಒಳಚರಂಡಿ ಜೋಡಣೆಗೆ ತಮ್ಮ ಹಿತ್ತಲಿನ ಮತ್ತು ಮನೆಯ ಸುತ್ತಮುತ್ತ ಬೀಳುವ ಮಳೆಯ ನೀರನ್ನು ಕೂಡ ಒಳಚರಂಡಿ ಆಳುಗುಂಡಿಗೆ ನೀಡಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.
ಈ ಕಾರಣದಿಂದಾಗಿ ನಗರದ ರಸ್ತೆಗಳಲ್ಲಿ ಹಾಕಲಾಗಿರುವ ಆಳುಗುಂಡಿಗಳಿಂದ ತ್ಯಾಜ್ಯ ನೀರು ಮಳೆಯ ಸಂದರ್ಭದಲ್ಲಿ ಉಕ್ಕಿ ಹರಿದು ರಸ್ತೆಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಇರುವ ಮಳೆಗಳಿಗೆ ನುಗ್ಗುತ್ತಿದೆ. ಅಲ್ಲದೆ ಒಳಚರಂಡಿ ಸಂಸ್ಕರಣ ಘಟಕಗಳಿಗೂ ವಿನ್ಯಾಸಗೊಳಿಸಿದ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಬಂದು ಸಂಸ್ಕರಣಾ ಘಟಕಗಳಲ್ಲಿ ತೀವ್ರ ತೊಂದರೆ ಉಂಟಾಗುತ್ತಿದೆ.
ಆದುದರಿಂದ ಸಾರ್ವಜನಿಕರು ತಮ್ಮ ನಿವಾಸದ ತ್ಯಾಜ್ಯ ನೀರನ್ನು ಮಾತ್ರ ಒಳಚರಂಡಿಗೆ ಸಂಪಕಿಸಿ ಮಳೆಯ ನೀರನ್ನು ಒಳಚರಂಡಿ ಜೋಡಣೆಯಿಂದ ಕಟ್ಟಾಯಿಸಿ ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು ಮತ್ತು ಅಂತಹ ಜೋಡಣೆಯನ್ನು ಈ ಪ್ರಕಟಣೆಯ ದಿನದಿಂದ 7 ದಿನಗಳ ಒಳಗಾಗಿ ಕಟ್ಟಾಯಿಸುವಂತೆ ಸಾರ್ವಜನಿಕರಲ್ಲಿ ಈ ಮೂಲಕ ತಿಳಿಸಲಾಗಿದೆ. ತಪ್ಪಿದಲ್ಲಿ ಯಾವುದೇ ವ್ಯಕ್ತಿ ಯಾ ಸಂಸ್ಥೆ ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
Comments are closed.