ಉಡುಪಿ: ವಲಸೆ ಕಾರ್ಮಿಕರು ಸೇರಿದಂತೆ ಹಲವು ಮಂದಿಗೆ ರಾತ್ರಿ ವೇಳೆ ಹಲ್ಲೆ ನಡೆಸಿ ಸೊತ್ತು ಹಾಗೂ ಹಣವನ್ನು ಸುಲಿಗೆ ಮಾಡುತ್ತಿದ್ದ ಯುವಕರ ತಂಡವೊಂದನ್ನು ಪತ್ತೆ ಹಚ್ಚಿರುವ ಉಡುಪಿ ಪೊಲೀಸರು, ಮಂಗಳೂರು ಹೋಮ್ ಸ್ಟೇ ದಾಳಿಯ ಪ್ರಮುಖ ಆರೋಪಿ ಸಹಿತ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಮಂಗಳೂರಿನ ಪ್ರಕರಣವೊಂದರ ಆರೋಪಿಯಾಗಿರುವ ಕಲ್ಯಾಣಪುರದ ಶ್ರೇಯಸ್ ಯಾನೆ ಸಚ್ಚು, ಅಭಿಜಿತ್, ವಿಘ್ನೇಶ್, ಸಂಪತ್, ಮನೀಶ್ ಕುಮಾರ್, ಶಶಾಂಕ್, ನಿಖಿಲ್ ಶೆಟ್ಟಿ ಬಂಧಿತ ಆರೋಪಿಗಳು. ಆರೋಪಿತರ ಪೈಕಿ ಅಭಿಷೇಕ್ ಹಾಗೂ ಹರ್ಷಿತ್ ಸದ್ಯ ತಲೆಮರೆಸಿಕೊಂಡಿದ್ದು ಇವರಿಗೆ ಶೋಧಕಾರ್ಯ ನಡೆಯುತ್ತಿದೆ.
ನಿಶಾಚರಿಗಳಾಗಿ ದೋಚುತ್ತಿದ್ದರು….
ಉಡುಪಿ, ಮಣಿಪಾಲ, ಮಂಗಳೂರು ಪರಿಸರದಲ್ಲಿ ರಾತ್ರಿ ವೇಳೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ವಲಸೆ ಕಾರ್ಮಿಕರು ಹಾಗೂ ಸ್ಥಳೀಯರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಈ ಯುವಕರ ತಂಡ, ಅವರಿಗೆ ಹಲ್ಲೆ ನಡೆಸಿ ಅವರಲ್ಲಿದ್ದ ಹಣ, ವೊಬೈಲ್ ದೋಚಿ ಪರಾರಿಯಾಗುತ್ತಿತ್ತು.
ಈ ಬಗ್ಗೆ ಯಾರು ಕೂಡ ಪೊಲೀಸರಿಗೆ ದೂರು ನೀಡದ ಹಿನ್ನೆಲೆಯಲ್ಲಿ ಮತ್ತು ಎಲ್ಲ ಘಟನೆಗಳು ರಾತ್ರಿ ವೇಳೆ ನಡೆದಿರುವುದರಿಂದ ಸಿಸಿ ಕ್ಯಾಮೆರಾಗಳಲ್ಲಿನ ಅಸ್ಪಷ್ಟ ದೃಶ್ಯಗಳಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಕೆಲ ತಿಂಗಳ ಹಿಂದೆ ಸಿಟಿ ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಅಲ್ಲೂ ಕೂಡ ಆರೋಪಿಗಳ ಗುರುತು ಪತ್ತೆಯಾಗಿರಲಿಲ್ಲ.
ಜೂ. 16ರಂದು ಆರೋಪಿಗಳು ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಸ್ಥಳೀಯರೊಬ್ಬರಿಗೆ ಹಲ್ಲೆ ನಡೆಸಿ, ಮೊಬೈಲ್ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಬಂದ ದೂರಿನಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಓರ್ವನ ಗುರುತು ಪತ್ತೆ ಹಚ್ಚಿ ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದರು. ಬಂಧಿತ ನೀಡಿದ ಮಾಹಿತಿ ಯಂತೆ ಪೊಲೀಸರು ಬೆಂಗಳೂರಿನಲ್ಲಿ ಮೂವರು ಹಾಗೂ ಮಂಗಳೂರಿನಲ್ಲಿ ಮೂವರನ್ನು ಬಂಧಿಸಿದರು.
Comments are closed.