ಕರಾವಳಿ

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳ ಹಿಂದೇಟು : ಕೆಐಎಡಿಬಿ ವಿರುದ್ಧ ಸಚಿವ ಖಾದರ್ ಅಸಮಾಧಾನ

Pinterest LinkedIn Tumblr

ಮಂಗಳೂರು : ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ  (ಕೆಐಎಡಿಬಿ) ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಕೈಗಾರಿಕಾ ಸ್ಥಾಪಿಸಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ, ವಿದ್ಯುತ್‍ನಂತಹ ಅಗತ್ಯ ಮೂಲಸೌಕರ್ಯಗಳನ್ನೇ ಕೆಐಎಡಿಬಿ ಸಮರ್ಪಕವಾಗಿ ಒದಗಿಸಿಲ್ಲ. ಮುಡಿಪು ಇರಾ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಜಮೀನು ಇದ್ದರೂ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೆಐಎಡಿಬಿ ಒದಗಿಸದೇ ಇರುವುದರಿಂದ ಅಲ್ಲಿ ಕೈಗಾರಿಕೆ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸಚಿವರು ಹೇಳಿದರು.

ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೇ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಕೆಐಎಡಿಬಿ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಉಳ್ಳಾಲ ಒಳಚರಂಡಿ: ಶೀಘ್ರ ಕಾಮಗಾರಿಗೆ ಸೂಚನೆ :

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ (ಯುಜಿಡಿ) ಯೋಜನೆಯ ಕಾಮಗಾರಿಯನ್ನು ಕೂಡಲೇ ಆರಂಭಿಸಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಉಳ್ಳಾಲ ನಗರಸಭೆ ಒಳಚರಂಡಿ ಯೋಜನೆಗೆ ಅಗತ್ಯ ಭೂಸ್ವಾಧೀನ ಮಾಡಲು ರೂ. 2.80 ಕೋಟಿ ಅಗತ್ಯವಿದೆ. ಈ ಸಂಬಂಧ ಈಗಾಗಲೇ ರೂ. 1.44 ಕೋಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ಕಂದಾಯ ಇಲಾಖೆಗೆ ಪಾವತಿಸಲಾಗುವುದು. ಬಾಕಿ ಮೊತ್ತ ಶೀಘ್ರವೇ ಪಾವತಿಸಲಾಗುವುದು ಎಂದು ತಿಳಿಸಿದರು.

ಉಳ್ಳಾಲದಲ್ಲಿ ಒಳಚರಂಡಿ ಯೋಜನೆ ದೀರ್ಘಕಾಲದಿಂದ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಕಾರ್ಯ ಶೀಘ್ರವೇ ಪೂರೈಸಿ, ಒಳಚರಂಡಿ ಕಾಮಗಾರಿ ಆರಂಭಿಸಬೇಕು ಎಂದು ಅವರು ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

Comments are closed.